ಹುಬ್ಬಳ್ಳಿ: ಕಾಂಗ್ರೆಸ್‌ನವರದ್ದು ಸುಳ್ಳು, ಮೋಸದಿಂದ ಕೂಡಿದ ದಗಲ್ ಬಾಜಿ ಪ್ರಣಾಳಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಅವರ ಪರ ಬೃಹತ್ ಪ್ರಚಾರ ನಡೆಸಿದ ಅವರು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ದಿವಾಳಿಯಾದ್ರೂ ಸಹ ಅಧಿಕಾರಕ್ಕೆ ಬರಬೇಕು ಎನ್ನುವ ಹುನ್ನಾರ ಕಾಂಗ್ರೆಸ್ ನಡೆಸಿದೆ. ಹೀಗಾಗಿ ಪ್ರಣಾಳಿಕೆಯಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಈಗಾಗಲೇ ನಾವು 1 ಲಕ್ಷ ಹುದ್ದೆಗೆ ನೋಟಿಫಿಕೇಶನ್ ಮಾಡಿದ್ದೇವೆ. ಕಳಸಾ ಬಂಡೂರಿ ಟೆಂಡರ್ ಕರೆದಿದ್ದೇವೆ. ಒಂದೂವರೆ ವರ್ಷದಲ್ಲಿ ನೀರು ತರುತ್ತೇವೆ. ಹಳ್ಳಿಗಳಲ್ಲಿ ಮನೆಗೆ ಕೇವಲ 25 ಯೂನಿಟ್ ಕರೆಂಟ್ ಸಾಕು ಆದರೆ 200 ಯೂನಿಟ್ ಉಚಿತ ಎಂದು ಕಾಂಗ್ರೆಸ್ ಗ್ಯಾರಂಟಿ ನೀಡಿದೆ. 175 ಯೂನಿಟ್ ಏನು ಮಾಡುತ್ತಾರೆ. ಕಾಂಗ್ರೆಸ್ ಪ್ರಣಾಳಿಕೆಗೆ 6 ಲಕ್ಷ ಕೋಟಿ ಹಣ ಬೇಕು ಅದನ್ನು ಎಲ್ಲಿಂದ ತರುತ್ತಾರೆ ಎಂದರಲ್ಲದೆ, ಸುಳ್ಳು ಆಶ್ವಾಸನೆ ನೀಡಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದರು.
ಮೊದಲಿನಿಂದಲೂ ಕಾಂಗ್ರೆಸ್‌ನವರದ್ದು ಕೇವಲ ಜನರಿಗೆ ಮೋಸ ಮಾಡುವ ಕೆಲಸವಾಗಿದೆ. ಅನ್ನಭಾಗ್ಯದಡಿಯಲ್ಲಿ 10 ಕೆಜಿ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅದಕ್ಕೂ ಮೊದಲು 10 ಕೆಜಿ ಇತ್ತು. ಅದನ್ನು ಐದು ಕೆಜಿಗೆ ಇಳಿಸಿ ಚುನಾವಣೆ ಸಂದರ್ಭದಲ್ಲಿ ಏಳು ಕೆಜಿಗೆ ಏರಿಸಿದ್ದು, ಸಿದ್ದರಾಮಯ್ಯ. ಅನ್ನಭಾಗ್ಯವನ್ನು ದೌರಬಾಗ್ಯ ಮಾಡಿದ್ದಾರೆ. ಅನ್ನಭಾಗ್ಯ ಹೆಸರಿನಲ್ಲಿ ಕನ್ನಭಾಗ್ಯ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು ಎಂದರು.
ಬಿಜೆಪಿ ದೇಶದ ರಕ್ಷಣೆ, ದೇಶ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಮತ ಕೇಳಿದರೆ, ಕಾಂಗ್ರೆಸ್ ಸಮಾಜ ಒಡೆದು, ಶಾಂತಿ ಕದಡಿ, ಸುಳ್ಳು ಭರವಸೆ ನೀಡಿ ಮತ ಕೇಳುತ್ತಿದೆ. ದೇಶ ಹಾಗೂ ರಾಜ್ಯದ ಸಮೃದ್ದಿಯಾಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದರು