ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಯೋಜನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

BASAVARAJ BOMAI
Advertisement

ಬೆಂಗಳೂರು : ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಯೋಜನೆ (ಎನ್ ಎಲ್ ಬಿ ಸಿ) ದೇಶದಲ್ಲಿಯೇ ಮಾದರಿಯಾಗಿದ್ದು, ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಯೋಜನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ನಾಳೆ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸಲಿದ್ದು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಯೋಜನೆಗೆ ಚಾಲನೆ ನೀಡುತ್ತಿದ್ದು, ಏಷ್ಯಾದಲ್ಲೇ ವಿಶಿಷ್ಟವಾದ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಅನುಷ್ಠಾನಗೊಳಿಸಲಾಗಿದೆ. ಪ್ರಧಾನಿ ಮೋದಿಯವರು ಇಂತಹ ಮಹತ್ವದ ಯೋಜನೆಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಇಂತಹ ಯೋಜನೆಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಗತಗೊಳಿಸಲು ಪ್ರೇರಣೆ ದೊರೆಯಲಿದೆ ಎಂದರು.
ಬಂಜಾರ ಮತ್ತು ಲಮಾಣಿ ತಾಂಡಾಗಳಿಗೆ ಮನೆ ಹಕ್ಕು ಪತ್ರ ವಿತರಣೆ :
ಸುಮಾರು ನಾಲ್ಕೈದು ದಶಕಗಳ ಬೇಡಿಕೆಯಾಗಿದ್ದ ಬಂಜಾರ ಮತ್ತು ಲಮಾಣಿ ಜನಾಂಗದ ತಾಂಡಾಗಳಿಗೆ ಗ್ರಾಮಗಳನ್ನು ಮಾಡಿ, ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸುತ್ತಿದ್ದಾರೆ. ಸಾಮಾಜಿಕವಾಗಿ ಪರಿವರ್ತನೆಯನ್ನು ತರುವಂತಹ ಬೃಹತ್ ಕಾರ್ಯಕ್ರಮ ಇದಾಗಲಿದೆ. ಈ ಜನಾಂಗದವರು ಅಲೆಮಾರಿಗಳಾಗಿ ಬದುಕದೇ, ಅವರ ಬದುಕಿಗೆ ಭದ್ರತೆ ಕೊಡುವಂತಹ ಉತ್ತಮ ಯೋಜನೆ ಇದಾಗಿದ್ದು, ಇಂತಹ ಯೋಜನೆಗಳಿಂದ ರಾಜ್ಯಕ್ಕೆ ಒಳಿತಾಗುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ :
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಆದಷ್ಟು ಬೇಗನೆ ತಿಳಿಸುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ. ನಿನ್ನೆಯ ದಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನಲೆ ಹೆಚ್ಚು ಸಮಯಾವಕಾಶವಿರಲಿಲ್ಲ ಎಂದರು.
ಯಾವ ಹೇಳಿಕೆಯನ್ನೂ ನೀಡುವುದಿಲ್ಲ :
ಬಿ ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ , ಕೀಳುಮಟ್ಟದ ಹೇಳಿಕೆಗೆ ಯಾವ ಪ್ರತಿ ಹೇಳಿಕೆಯನ್ನು ನೀಡುವುದಿಲ್ಲ , ಬಿ.ಕೆ.ಹರಿಪ್ರಸಾದ್ ರಿಗೆ ಇದೇ ನನ್ನ ಉತ್ತರ ಎಂದರು.
ಕಾಂಗ್ರೆಸ್ ನವರ ಮೇಲಿನ ವಿಶ್ವಾಸಾರ್ಹತೆ ಇಲ್ಲವಾಗಿದೆ :
ನಾ ನಾಯಕಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ 2 ಸಾವಿರ ಘೋಷಣೆ ವಿಚಾರಕ್ಕೆ ಉತ್ತರಿಸಿ , ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಇವುಗಳನ್ನೇಕೆ ಮಾಡಲಿಲ್ಲ. ಅಂದು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಇನ್ನು ಮುಂದೆ ಮಾಡುತ್ತಾರೆ ಎಂಬ ಖಾತ್ರಿಯೂ ಇಲ್ಲ. ಕಾಂಗ್ರೆಸ್ ಮೇಲಿನ ಜನರ ವಿಶ್ವಾಸಾರ್ಹತೆ ಇಲ್ಲವಾಗಿದೆ. ಸರ್ಕಾರ, ಹಣಕಾಸು ಇವೆಲ್ಲವನ್ನೂ ಅವಲೋಕಿಸಿ, ಸಾಧಕ ಭಾದಕಗಳನ್ನು ಅರಿತು ಗಂಭೀರವಾದ ಯೋಜನೆಗಳನ್ನು ಘೋಷಿಸಲಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತೇವೆ ಎಂದರು.