ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರಕಾರದ ಪರ ಅಲೆಯೊಂದಿಗೆ ಬಿಜೆಪಿ 150 ಸ್ಥಾನಗಳೊಂದಿಗೆ ಮತ್ತೊಮ್ಮೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ. ಪ್ರತಾಪಸಿಂಹ ನಾಯಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 150 ಸ್ಥಾನದೊಂದಿಗೆ ಎರಡನೇ ಅವಧಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರಕಾರವನ್ನು ಬಿಜೆಪಿ ರಚಿಸಿ ದಾಖಲೆ ಬರೆಯಲಿದೆ ಎಂದರು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಮಾತ್ರವಲ್ಲ ಜಿಲ್ಲೆಗೊಂದು ಗೋ ಶಾಲೆ ತೆರೆಯಲಿದೆ. ಮುಂದಿನ ದಿನಗಳಲ್ಲಿ ‘ಎ’ಗ್ರೇಡ್ ದೇವಸ್ಥಾನದ ಸಹಯೋಗದೊಂದಿಗೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಗೋ ಶಾಲೆ ತೆರೆಯಲಾಗುವುದು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಸರಕಾರ ಆದ್ಯತೆ ನೀಡಿ ಈಗಾಗಲೇ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 2 ಕೋಟಿ ರೂ. ಮಂಜೂರು ಮಾಡಿದೆ. ಹನುಮಂತನ ಜನ್ಮಸ್ಥಳವನ್ನು ಯಾತ್ರಾ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಂತರ್ಜಲ ಹೆಚ್ಚಿಸಲು ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲೂ ಹಣ ಬಿಡುಗಡೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ 1,500 ಕೋಟಿಗಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದು ವಿವರಿಸಿದರು.
ಗುಜರಾತ್ ಗೆಲುವು ಬಿಜೆಪಿಗೆ ಹುಮ್ಮಸ್ಸು ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು, ಅಭಿವೃದ್ಧಿ ಕೆಲಸಗಳು ಗೆಲುವಿಗೆ ಪೂರಕವಾಗಲಿದೆ. ಉಭಯ ಸರಕಾರಗಳ ಸಾಧನೆಗಳನ್ನು ರಾಜ್ಯದ ಪ್ರತೀ ಮನೆ ಮನೆಗೆ ತಲುಪಿಸಲಾಗುವುದು. ಗ್ರಾಮ ಪಂಚಾಯತ್ ಮಟ್ಟದಿಂದಲೇ ಆ ಕೆಲಸವಾಗಲಿದೆ. ಸ್ಥಿರತೆ ಮತ್ತು ನಿರಂತರತೆಗೆ ಜನ ಬಿಜೆಪಿ ಕೈ ಹಿಡಿಯಲಿದ್ದಾರೆ. ಭ್ರಷ್ಟಾಚಾರದ ಆರೋಪ ಮಾಡುವವರು ಯಾವುದೇ ದಾಖಲೆಗಳಿಲ್ಲದೆ ಮಾತನಾಡುತ್ತಿದ್ದಾರೆ, ಚುನಾವಣೆ ಸಮೀಪಿಸುತ್ತಿದ್ದಾಗ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನತೆಗೆ ವಾಸ್ತವದ ಅರಿವಿದೆ ಎಂದರು.
‘ಶಕ್ತಿಸಂಗಮ’
ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ ‘ಶಕ್ತಿಸಂಗಮ’ ಡಿ. 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ ಸಂಚಾಲಕರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಸೇರಿದಂತೆ ಸುಮಾರು 18 ಸಾವಿರ ಅಪೇಕ್ಷಿತರರು ಭಾಗವಹಿಸುವರು. ದ. ಕ. ಜಿಲ್ಲೆಯಿಂದ 1,500 ಮಂದಿ ಭಾಗವಹಿಸುವರು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರದ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸುವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗವಹಿಸುವರು. ಸಾಂಸ್ಕೃತಿಕ ಪ್ರಕೋಷ್ಠದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರುಇ.
ಬಿಜೆಪಿ ನಾಯಕರಾದ ರವಿಶಂಕರ ಮಿಜಾರು, ನಾರಾಯಣ ಗಟ್ಟಿ, ಸಂದೇಶ್ ಶೆಡ್ಟಿ, ಜಗದೀಶ ಶೇಣವ ಉಪಸ್ಥಿತರಿದ್ದರು.
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ರಾಜ್ಯದಲ್ಲಿ ಬಿಜೆಪಿ 150 ಸ್ಥಾನದೊಂದಿಗೆ ಅಧಿಕಾರಕ್ಕೆ: ಕೆ. ಪ್ರತಾಪಸಿಂಹ ನಾಯಕ್ ವಿಶ್ವಾಸ