ರಾಜ್ಯದಲ್ಲಿ ಮುಂಗಾರು ಇಣುಕಿಲ್ಲ. ನೀರಿನ ತೀವ್ರ ಕೊರತೆ ಎಲ್ಲ ಕಡೆ ಕಂಡುಬರುತ್ತಿದೆ. ಈ ಬಾರಿ ಮಲೆನಾಡಿನಲ್ಲಿ ಮಳೆ ಕೊರತೆ ಎದ್ದು ಕಂಡು ಬರುತ್ತಿದೆ. ಕೊಡಗು ಮತ್ತು ಚಿಕ್ಕಮಗಳೂರಿನ ಜನರೇ ಈಗ ಕೊಳವೆಬಾವಿ ಆಶ್ರಯಿಸಬೇಕಾಗಿ ಬಂದಿದೆ. ಚಂಡಮಾರುತ ಬಂದಿದ್ದರಿಂದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಹಿಂದೆ ಸರಿದಿದೆ. ಈಗ ಮುಂಗಾರು ಮುಂದಕ್ಕೆ ಹೋಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಅದು ಮತ್ತೆ ಬರುತ್ತದೋ ಇಲ್ಲವೋ ತಿಳಿಯದು. ಹಿಂದೊಮ್ಮೆ ಮುಂಗಾರಿಗೆ ಮುನ್ನ ಚಂಡ ಮಾರುತ ಇದೇ ರೀತಿ ಬಂದು ಮುಂಗಾರು ಕೈಕೊಟ್ಟಿತು. ಆ ಪರಿಸ್ಥಿತಿ ಈಗಲೂ ಬರುತ್ತದೋ ಎಂಬ ಆತಂಕ ಮೂಡಿದೆ. ನಮ್ಮಲ್ಲಿ ಮಳೆಯನ್ನೇ ಆಶ್ರಯಿಸಿರುವ ಜಿಲ್ಲೆಗಳಲ್ಲಿ ಈಗಲೇ ನೀರಿನ ಬರ ಕಾಣಿಸಿಕೊಂಡಿದೆ. ಕೊಪ್ಪಳ ಜಿಲ್ಲೆ ಮೊದಲಿನಿಂದಲೂ ನೀರಿನ ಅಭಾವ ಕಂಡಿರುವ ಪ್ರದೇಶ. ಇಲ್ಲಿ ೨೦ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಬಂದಿದೆ. ಖಾಸಗಿ ಕೊಳವೆ ಬಾವಿ ಇರುವವರು ಪ್ರತಿ ಟ್ಯಾಂಕರ್‌ಗೆ ೬೦೦-೮೦೦ ರೂ ನಂತೆ ಮಾರಾಟ ಮಾಡುತ್ತಿದ್ದಾರೆ. ಅದೇರೀತಿ ಕುಡಿಯುವ ನೀರಿನ ಕ್ಯಾನ್‌ಗಳ ಮಾರಾಟವೂ ಜೋರಾಗಿ ಸಾಗಿದೆ. ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರಿನಿಂದ ಮಗುವೊಂದು ಮೃತಪಟ್ಟ ಮೇಲೆ ಸರ್ಕಾರಿ ಯಂತ್ರ ಚುರುಕುಕೊಂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಿಂದಿನಿಂದಲೂ ಈ ಜಿಲ್ಲೆಯ ತಾಂಡಾಗಳಲ್ಲಿ ವಾಸಿಸುವ ಜನ ಗುಳೇ ಹೋಗುವ ಪದ್ಧತಿ ಇದೆ. ಈಗಾಗಲೇ ಹಳ್ಳಿಯ ಜನ ಬೆಂಗಳೂರು, ಕರಾವಳಿ ಜಿಲ್ಲೆಗಳಿಗೆ ಗುಳೇ ಹೋಗಿದ್ದಾರೆ. ಹಿಂದಿನಿಂದಲೂ ಕುಡಿಯುವ ನೀರು ಪೂರೈಕೆ ಯೋಜನೆಗಳು ಕುಂಟುತ್ತ ಸಾಗುತ್ತ ಬಂದಿದೆ. ಕೇಂದ್ರ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ಗ್ರಾಮಗಳಿಗೆ ನೀರು ಒದಗಿಸಲು ಶೇಕಡ ೧೦೦ ರಷ್ಟು ಹಣ ನೀಡುತ್ತದೆ. ಆದರೂ ಇನ್ನೂ ಹಳ್ಳಿಗಳ ಪರಿಸ್ಥಿತಿ ಹಾಗೆ ಇದೆ. ಹಿಂದೆ ನಜೀರ್ ಸಾಬ್ ಕೊಳವೆ ಬಾವಿ ನಿರ್ಮಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲದಂತೆ ಮಾಡಿದ್ದರು. ಅವರ ನಂತರ ಕುಡಿಯುವ ನೀರನ್ನು ಒದಗಿಸುವ ದೀಕ್ಷೆ ತೆಗೆದುಕೊಂಡು ದುಡಿಯುವ ರಾಜಕಾರಣಿ ಕಂಡುಬಂದಿಲ್ಲ. ಒಟ್ಟು ೧೭ ಜಿಲ್ಲೆಗಳಲ್ಲಿ ನೀರಿನ ಅಭಾವ ಕಂಡು ಬಂದಿದೆ. ಮುಂಗಾರು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆಗಮಿಸುತ್ತಿತ್ತು.
ಈಗ ಎರಡನೇ ವಾರ ಕಳೆಯುತ್ತ ಬಂದರೂ ಸುಳಿವಿಲ್ಲ. ಮೋಡ ಬಿತ್ತನೆ ಇದುವರೆಗೆ ಫಲಕಾರಿಯಾಗಿಲ್ಲ. ರಾಜ್ಯದಲ್ಲಿ ಭೂಮಿಯ ಸಾರ ಸಂಗ್ರಹಿಸುವ ಕೆಲಸ ನಡೆದಿಲ್ಲ. ಮಲೆನಾಡಿನಲ್ಲೇ ಮೇಲ್ಮೆ ಭೂಮಿ ಕೊಚ್ಚಿ ಹೋಗುವ ರೀತಿಯಲ್ಲಿ ಕೃಷಿ ನಡೆದಿದೆ. ಇದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಪ್ರತಿ ಜಿಲ್ಲೆಯಲ್ಲಿ ಯಾವ ಬೆಳೆ ಹಾಕಬೇಕು ಎಂಬ ವಿಚಾರ ಸ್ಪಷ್ಟವಾಗಿಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತಿದೆ. ಹಿಂದೆ ಮಲೆನಾಡಿನಲ್ಲಿ ಶುಂಠಿ ಬೆಳೆಯುತ್ತಿರಲಿಲ್ಲ. ಈಗ ಎಲ್ಲ ಕಡೆ ವಾಣಿಜ್ಯ ಬೆಳೆಗೆ ಮಹತ್ವ ಬಂದಿದೆ. ಪರಿಸರ ಅಸಮತೋಲನ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇದರ ಬಗ್ಗೆ ವೈಜ್ಞಾನಿಕ ಚಿಂತನೆ ನಡೆಯುತ್ತಿಲ್ಲ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ನಡುವೆ ಸಾಮರಸ್ಯ ಇಲ್ಲದಂತಾಗಿದೆ. ರಾಜ್ಯದಲ್ಲಿ ಅರಣ್ಯ ಪ್ರದೇಶ ಇಳಿಮುಖಗೊಂಡಿದೆ. ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಕೃಷಿ ಪದ್ಧತಿಯನ್ನೂ ಬದಲಿಸಬೇಕಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಸರಾಸರಿ ೭೦ ಮಿಮಿ ಮಳೆ ಕಡಿಮೆ ಬಂದಿದೆ. ಈ ಬಾರಿ ಕರಾವಳಿಯಲ್ಲೇ ಮಳೆ ಇಳಿಮುಖಗೊಂಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ.
ಅಗತ್ಯ ವಸ್ತುಗಳ ಬೆಲೆ ಮತ್ತೆ ಅಧಿಕಗೊಳ್ಳುವ ಅಪಾಯವಿದೆ. ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದಕ್ಕಿಂತ ಮಳೆ ಆಶ್ರಯದ ಭೂಮಿಯಲ್ಲಿ ನೀರಿನ ಸಂಗ್ರಹ ಕಾರ್ಯವನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಭೂಸಾರ ಸಂರಕ್ಷಣೆಗೆ ಆದ್ಯತೆ ನೀಡುವುದು ಮುಖ್ಯ. ಭೂಸುಧಾರಣೆಗೆ ಸಂಬಂಧಿಸಿದಂತೆ ಕಾನೂನು ರಚಿಸಿದ ಮೇಲೆ ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆ ಅಧಿಕಗೊಂಡಿದೆ. ಇದರಿಂದ ಬೇಸಾಯ ಲಾಭದಾಯಕ ಉದ್ದಿಮೆಯಾಗಿ ಉಳಿದಿಲ್ಲ.
ಸಕಾಲದಲ್ಲ ಮಳೆ ಬಾರದೇ ಹೋದಲ್ಲಿ ಕೃಷಿ ಕಾರ್ಮಿಕರು ಸೇರಿದಂತೆ ಇಡಿ ಗ್ರಾಮದ ಜನ ನಿರುದ್ಯೋಗಿಗಳಾಗುತ್ತಾರೆ. ಅವರಿಗೆ ಉದ್ಯೋಗ ಒದಗಿಸುವುದಕ್ಕೆ ಈಗ ಇರುವುದು ನರೇಗಾ ಯೋಜನೆ ಮಾತ್ರ. ರಾಜ್ಯ ಸರ್ಕಾರ ಈಗಲೇ ಇದರ ಬಗ್ಗೆ ಚಿಂತಿಸಿ ಪರ್ಯಾಯ ಉದ್ಯೋಗ ನೀಡುವ ಬಗ್ಗೆ ಚಿಂತಿಸಬೇಕು. ಹಳ್ಳಿಯ ಜನ ನಗರಕ್ಕೆ ವಲಸೆ ಬಂದಲ್ಲಿ ಕೊಳಚೆ ಪ್ರದೇಶಗಳು ಬೆಳೆಯುತ್ತದೆಯೇ ಹೊರತು ಗ್ರಾಮದ ಬೆಳವಣಿಗೆ ಆಗುವುದಿಲ್ಲ. ಅಬ್ದುಲ್ ಕಲಾಂ ರಾಷ್ಟçಪತಿಯಾಗಿದ್ದಾಗ ಕರ್ನಾಟಕದ ವಿಧಾನಮಂಡಲದಲ್ಲಿ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿ `ಪುರ’ ಎಂಬ ಯೋಜನೆಯನ್ನು ಪ್ರಕಟಿಸಿದ್ದರು. ಅದರಂತೆ ಗ್ರಾಮಗಳಲ್ಲೇ ನಗರದ ಮೂಲಭೂತ ಸವಲತ್ತು ಕಲ್ಪಿಸಿಕೊಡುವುದು.
ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಹಳ್ಳಿಯ ಜನ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ನಗರಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಹಳ್ಳಿಯ ಜನರ ಬದುಕು ವರುಣನ ಕೃಪೆಯನ್ನು ಅವಲಂಬಿಸಿದೆ. ತಡವಾಗಿಯಾದರೂ ಮಳೆ ಬಂದಲ್ಲಿ ಜನ ಜಾನುವಾರು ಸುರಕ್ಷಿತ.
ಇಲ್ಲದಿದ್ದಲ್ಲಿ ಜನರ ಗುಳೆ ಹಾಗೂ ಗೋವುಗಳ ಮಾರಾಟ ತಪ್ಪಿದ್ದಲ್ಲ. ಮುಂದಿನ ದಿನಗಳಲ್ಲಿ ಮಳೆ ಜನರ ಭವಿಷ್ಯವನ್ನು ನಿರ್ಧರಿಸಲಿದೆ.