ಜಿಎಸ್‌ಟಿ ಪರಿಹಾರದ ಎಲ್ಲಾ ಬಾಕಿ ಹಣವನ್ನು ಬಿಡುಗಡೆ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ. ಜಿಎಸ್‌ಟಿ ದರಗಳನ್ನು ನಿಗದಿಪಡಿಸುವ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ನ 49ನೇ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 16,982 ಕೋಟಿ ರೂ.ಗಳ ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. “ಆದರೆ ಇಂದು ಈ ಹಣವು ನಿಜವಾಗಿಯೂ ಪರಿಹಾರ ನಿಧಿಯಲ್ಲಿ ಲಭ್ಯವಿಲ್ಲ. ಹೀಗಿದ್ದೂ ಈ ಮೊತ್ತವನ್ನು ನಮ್ಮ ಸ್ವಂತ ಸಂಪನ್ಮೂಲಗಳಿಂದ ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ಮತ್ತು ಇದೇ ಮೊತ್ತವನ್ನು ಭವಿಷ್ಯದಲ್ಲಿ ಪರಿಹಾರ ಸೆಸ್ ಸಂಗ್ರಹದಿಂದ ಮರುಪಾವತಿ ಮಾಡಲಾಗುವುದು,” ಎಂದು ಫೆಬ್ರವರಿ 18ರಂದು ಹಣಕಾಸು ಸಚಿವರು ವಿವರ ನೀಡಿದ್ದಾರೆ.