ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು ಹಗರಣಗಳ ಕೂಟವಾಗಿ ಪರಿಣಮಿಸಿ, ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದು ಜನರ ತೆರಿಗೆಯಲ್ಲಿ ಜನರ ಅಭಿವೃದ್ಧಿ ಬದಲಾಗಿ ತಾವೇ ಅಭಿವೃದ್ಧಿ ಹೊಂದಿ ಇಡೀ ರಾಜ್ಯವನ್ನೇ ಬರ್ಬಾದ್ ಮಾಡುವಲ್ಲಿ ಕಾರಣವಾಗಿವೆ. ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಜನತೆ ಆಪ್‌ಗೆ ಆಶೀರ್ವದಿಸುವ ಮೂಲಕ ರಾಜ್ಯದ ಆಡಳಿತಕ್ಕೆ ಆಮ್ ಆದ್ಮಿ ಪಕ್ಷ ಅನಿವಾರ್ಯವಾಗಲಿದೆ ಎಂದು ಪಕ್ಷದ ಮುಖಂಡ ಟೆನ್ನಿಸ್ ಕೃಷ್ಣ ಹೇಳಿದರು.
ತೇರದಾಳ ವಿಧಾನಸಭಾ ಕ್ಷೇತ್ರದ ಬನಹಟ್ಟಿಯ ಕೆಎಚ್‌ಡಿಸಿ ಕಾಲನಿಯಲ್ಲಿ ಪಾದಯಾತ್ರೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸುವ ಮುಂಚೆ ಪ್ರಣಾಳಿಕೆಗೆ ತಕ್ಕಂತೆ ನಡೆದ ಸರ್ಕಾರ ದೆಹಲಿ ಹಾಗು ಪಂಜಾಬ್‌ಗಳಲ್ಲಿನ ಆಪ್ ಪಕ್ಷ. ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಸರ್ಕಾರ ನಿರ್ಮಾಣವಾಗಿ ಭವಿಷ್ಯ ಬದಲಾವಣೆ ನಡೆಯಲಿದೆ ಎಂದರು.
ಆಸ್ಪತ್ರೆ ಹಾಗು ಶಾಲೆ ಸೇರಿದಂತೆ ಅನೇಕ ಸೇವಾ ಕೇಂದ್ರಗಳು ರಾಜಕಾರಣಿಗಳ ವಶದಿಂದ ಲೂಟಿ ಹೊಡೆಯುವ ಕೇಂದ್ರಗಳಾಗಿವೆ. ಇವೆಲ್ಲದಕ್ಕೂ ತಿಲಾಂಜಲಿಯಿಡಲು ಆಪ್ ಸನ್ನದ್ಧಗೊಂಡಿದೆ ಎಂದರು. ಈಗಾಗಲೇ ಚಿತ್ರದುರ್ಗ, ದಾವಣಗೆರೆ ಹಾಗು ಮಂಗಳೂರು ಸೇರಿದಂತೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯಿದ್ದು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದೇವೆಂದರು.
ಸ್ಪರ್ಧೆ ಖಚಿತ
ಪಕ್ಷದ ಹಿರಿಯರ ಅನುಮತಿ ಮೆರೆಗೆ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಇಳಿಯಲಿದ್ದು, ಉತ್ತರ ಕರ್ನಾಟಕದ ಯಾವುದಾದರೂ ಸೂಕ್ತ ಮತಕ್ಷೇತ್ರ ಗುರ್ತಿಸಿದ್ದಲ್ಲಿ ಸ್ಪರ್ಧೆ ಖಚಿತವೆಂದು ಟೆನ್ನಿಸ್ ಕೃಷ್ಣ ತಿಳಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಕಲಾದಗಿ ಮಾತನಾಡಿ, ಆಮ್ ಆದ್ಮಿ ಪಕ್ಷವು ಬೇರು ಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ತಳವೂರಿದೆ. ಬ್ಲಾಕ್, ಸರ್ಕಲ್, ವಾರ್ಡ್ ಹಾಗು ಭೂತ್ ಮಟ್ಟದ ಕಾರ್ಯಕರ್ತರನ್ನು ರಚನೆ ಮಾಡುವದರೊಂದಿಗೆ ರಾಷ್ಟಿಯ ಪಕ್ಷಗಳಿಗೆ ಪ್ರಬಲವಾಗುವಲ್ಲಿ ಆಪ್ ಯಶಸ್ವಿಯಾಗಿದೆ ಎಂದರು.