ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ತವರಿಗೆ ಆಗಮಿಸಿದರು. ಕೆಐಎಎಲ್ನಲ್ಲಿ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇವನಹಳ್ಳಿ, ಬ್ಯಾಟರಾಯನಪುರ, ಹೆಬ್ಬಾಳ ಬಳಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರೂ ಜಮಾಯಿಸಿದ್ದರು. ಖರ್ಗೆಯವರ ತವರು ಜಿಲ್ಲೆ ಕಲಬುರಗಿಯ ಅನೇಕ ಕಾರ್ಯಕರ್ತರು ಏರ್ಪೋರ್ಟ್ನಲ್ಲಿ ಸೇರಿದ್ದರು. ಸ್ವಾಗತಕ್ಕೆಂದೇ ಸಾದಹಳ್ಳಿಗೇಟ್ ಬಳಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಏರ್ ಪೋರ್ಟ್ ರಸ್ತೆಯಿಂದ ಅರಮನೆ ಮೈದಾನದವರೆಗೂ ಖರ್ಗೆಯವರಿಗೆ ಸ್ವಾಗತ ಕೋರುವ ಬೃಹತ್ ಕಟೌಟ್ಗಳು ತಲೆ ಎತ್ತಿವೆ. ಒಂದು ಬದಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಟೌಟ್ಗಳು, ಮತ್ತೊಂದು ಬದಿಯಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕಟೌಟ್ಗಳು ರಾರಾಜಿಸುತ್ತಿವೆ.