ರಾಜಕೀಯ `ಜಂಕ್ಷನ್’ನಲ್ಲಿ ಚರ್ಚೆಗಳದ್ದೇ ದರ್ಬಾರು !

Advertisement

ಹುಬ್ಬಳ್ಳಿ: ಉತ್ತರ ಕರ್ನಾಟಕದ ನಾಲ್ಕು ಕ್ಷೇತ್ರಗಳ ಫಲಿತಾಂಶದ ಬಗ್ಗೆ ಹುಬ್ಬಳ್ಳಿ ಮಹಾನಗರದಲ್ಲಿ ಭಾರೀ ಅಂತೆ- ಕಂತೆಗಳು; ಮೌಖಿಕ ಬೆಟ್ಟಿಂಗ್ ಹಾಗೂ ಲೆಕ್ಕಾಚಾರಗಳು ಜೋರಾಗಿವೆ. ಧಾರವಾಡವಂತೂ ಸರಿಯೇ ಸರಿ. ಜೊತೆಗೆ ಹಾವೇರಿ-ಗದಗ; ಬೆಳಗಾವಿ ಮತ್ತು ಕೆನರಾ (ಉತ್ತರ ಕನ್ನಡ) ಫಲಿತಾಂಶವನ್ನು ಹುಬ್ಬಳ್ಳಿ ಬಿಟ್ಟಗಣ್ಣಿನಿಂದ ಕಾಯುತ್ತಿದೆ.
ಈ ನಾಲ್ಕೂ ಲೋಕಸಭಾ ಕ್ಷೇತ್ರಗಳಿಗೆ ಹುಬ್ಬಳ್ಳಿ ಜಂಕ್ಷನ್ ಆಗಿರುವುದಷ್ಟೇ ಇದಕ್ಕೆ ಕಾರಣವಲ್ಲ. ಹಾಗೆಯೇ ಇದು ಉತ್ತರ ಕರ್ನಾಟಕದ ಕೇಂದ್ರ ಸ್ಥಾನ ಎಂಬುದೂ ಅಷ್ಟು ದೊಡ್ಡ ಸಂಗತಿಯಲ್ಲ. ಆದರೆ ಇಲ್ಲಿಂದ ಸ್ಪರ್ಧಿಸಿರುವ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಹುಬ್ಬಳ್ಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಮತ್ತು ಹುಬ್ಬಳ್ಳಿಯ ಸ್ಥಳೀಯಷ್ಟೇ ಇಲ್ಲಿನವರು' ಎಂಬಂತಿರುವುದು ಇದಕ್ಕೆ ಮುಖ್ಯ ಕಾರಣ. ಧಾರವಾಡ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಾಂತ್ರಿಕ ಮತ್ತು ಭಾವನಾತ್ಮಕ ಅಂಶಗಳೆರಡರಿಂದಲೂ ಲೋಕಲ್‌ನವರು. ಬೆಳಗಾವಿ ಮತ್ತು ಹಾವೇರಿ-ಗದಗ ಬಿಜೆಪಿ ಹುರಿಯಾಳುಗಳಾದ ಜಗದೀಶ ಶೆಟ್ಟರ ಮತ್ತು ಬಸವರಾಜ ಬೊಮ್ಮಾಯಿ ಕೂಡ ಹುಬ್ಬಳ್ಳಿಯವರೇ. ಶಿರಸಿಯ (ಕೆನರಾ) ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವನಾತ್ಮಕವಾಗಿ ಹುಬ್ಬಳ್ಳಿ-ಧಾರವಾಡದೊಂದಿಗೆ ಅವಿನಾಭಾವ ನಂಟು ಹೊಂದಿದವರು. ಹೀಗಾಗಿ ಹುಬ್ಬಳ್ಳಿಯಲ್ಲಿ ಫಲಿತಾಂಶದ ಮುನ್ನಾ ದಿನ ಕೇವಲ ಧಾರವಾಡದ ಪ್ರಲ್ಹಾದ ಜೋಶಿ ಭವಿಷ್ಯದ ಬಗ್ಗೆ ಮಾತ್ರ ಕುತೂಹಲ ಕಾಣುತ್ತಿಲ್ಲ. ಬದಲಾಗಿ ಶೆಟ್ಟರ, ಬೊಮ್ಮಾಯಿ ಮತ್ತು ಕಾಗೇರಿ ಫಲಿತಾಂಶದ ಕಡೆಗೂ ಜನತೆ ಕಣ್ಣರಳಿಸಿಕೊಂಡು ಕಾಯುತ್ತಿದ್ದಾರೆ. ಸಂಘ ಪರಿವಾರದ ಪ್ರಬಲ ಕಟ್ಟಾಳುವಾಗಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟವರಲ್ಲಿ ಓರ್ವರಾಗಿದ್ದ ಶೆಟ್ಟರ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದರು. ಇದರಿಂದಾಗಿ ಮುನಿಸುಕೊಂಡು ಮೂವತ್ತು ವರ್ಷಗಳಿಗೂ ಹೆಚ್ಚಿನ ನಂಟಸ್ತನ ಹೊಂದಿದ್ದ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ್ದರು. ಆದರೆ ಕೈ ಪಾಳಯದ ಸಿದ್ಧಾಂತ ಸರಿಹೋಗದೇ ಮತ್ತೆ ಘರ್ ವಾಪಸಿ ಆಗಿದ್ದಾರೆ. ಮೂರು-ನಾಲ್ಕು ದಶಕಗಳ ಕಮಲ ಪಾಳಯದ ಈ ರಾಜಕೀಯ ಅನುಭವಿಗಳಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಯುವ ಅಭ್ಯರ್ಥಿಗಳು ಹೇಗೆ ಮತ್ತು ಎಷ್ಟು ಫೈಟ್ ಕೊಟ್ಟಿದ್ದಾರೆ ಎಂಬುದನ್ನು ಮಂಗಳವಾರ ಇವಿಎಂಗಳನ್ನು ತೆರೆದ ನಂತರವೇ ಗೊತ್ತಾಗಿ ಕುತೂಹಲಕ್ಕೆ ತೆರೆ ಬೀಳಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ೨೦೦೪ರಿಂದ ಸತತ ನಾಲ್ಕು ಬಾರಿ ಧಾರವಾಡದಿಂದ ಗೆದ್ದಿರುವ ಈ ಬಿಜೆಪಿ ನಾಯಕ, ಐದನೇ ಬಾರಿ ದೆಹಲಿಗೆ ಹೋಗಲು ಕಾದಿದ್ದಾರೆ. ಜೋಶಿ ಅವರ ಈ ಬಯಕೆ ಈಡೇರುವುದೇ? ಗೆಲುವು ಒಲಿದರೆ, ಮೋದಿಯ ಕಾರಣಕ್ಕೋ, ಮಾಡಿರುವ ಅಭಿವೃದ್ಧಿಗೋ ಅಥವಾ ಎರಡೂ ಕಾರಣಗಳಿಗೋ ಎಂಬುದು ಜನರ ಚರ್ಚೆಯ ವಿಷಯವಾಗಿದೆ. ಇವೆಲ್ಲ ಅಂಶಗಳು ಸೋಮವಾರ ಬೆಳಿಗ್ಗೆಯಿಂದಲೇ ಹುಬ್ಬಳ್ಳಿಯ ರಾಜಕೀಯ ಹರಟೆಗಳಿಗೆ ವಸ್ತುವಾಗಿದ್ದು, ಜನತೆ ತಮ್ಮದೇ ಆದ ತರ್ಕಗಳೊಂದಿಗೆಗೆಲುವು-ಸೋಲುಗಳ’ ಕಾಗುಣಿತ ಮಾಡುತ್ತಿದ್ದರು. ಜನರ ಕುತೂಹಲಕ್ಕೆ ಜೂನ್ ೧ರಂದು ಹೊರಬಿದ್ದಿರುವ ಎಕ್ಸಿಟ್ ಪೋಲ್ ಕೂಡ ಸಾಕಷ್ಟು ಪೂರಕ ಆಹಾರ ಒದಗಿಸಿತ್ತು ಎನ್ನಲಡ್ಡಿಯಿಲ್ಲ.