ರಾಜಕೀಯಕ್ಕೆ ನಾನು ಆಕಸ್ಮಿಕವಾಗಿ ಬಂದವ, ಅಧಿಕಾರ ಲಾಲಸೆಗೆ ಅಲ್ಲ: ಶೆಟ್ಟರ ನೋವಿನ ನುಡಿ

ಶೆಟ್ಟರ್‌
Advertisement

ಹುಬ್ಬಳ್ಳಿ : ರಾಜಕಾಣಕ್ಕೆ ನಾನು ಆಕಸ್ಮಿಕವಾಗಿ ಬಂದವ. ಅಧಿಕಾರ ಲಾಲಸೆಯಿಂದ ಅಲ್ಲ. ಆದರೆ, ಅವಕಾಶಗಳು ಬಂದವು. ಅವುಗಳ ಸದುಪಯೋಗ ಪಡೆದುಕೊಂಡು ಅಭಿವೃದ್ದಿಗೆ ಶ್ರಮಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ತಮ್ಮ ನಿವಾಸದಲ್ಲಿ ಸೇರಿದ ಕಿಕ್ಕಿರದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಲ್ಪ ಹೊತ್ತು ಭಾವುಕರಾದರು.
ನಮ್ಮದು ಜನಸಂಘ ಕಾಲದಿಂದಲೂ ಪಕ್ಷ ಕಟ್ಟಿದ ಕುಟುಂಬ. ಆದರೆ ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ ಅಷ್ಟೇ. ಜನಸೇವೆ ಮಾಡಲು ಲಭಿಸಿದ ಅವಕಾಶ ಬಳಸಿಕೊಂಡಿದ್ದೇನೆ. ಕ್ಷೇತ್ರದ ಜನರು ಸತತ 6 ಬಾರಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಹಳ್ಳಿ ಹಳ್ಳಿಯಲ್ಲೂ ಪಕ್ಷ ಸಂಘಟನೆ ಮಾಡಿದ್ದೇನೆ. ಹೀಗಾಗಿ ಪಕ್ಷ ರಾಜ್ಯ ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆಯಲು ಕಾರಣ ಎಂದು ಹೇಳಿದರು.ನನ್ನನ್ನು ಲೀಡರ್, ಹಿರೋ ಮಾಡಿದ್ದು ಜನರು. ನೀವು ಇಲ್ಲದಿದ್ದರೆ ಜಗದೀಶ ಶೆಟ್ಟರ ಇಲ್ಲ. ಹೀಗಾಗಿ ನಿಮ್ಮ ಅಭಿಮಾನಕ್ಕೆ ಕೃತಜ್ಞತೆಗಳು ಎಂದರು.
ನಾಡಿನ ವಿವಿಧ ಭಾಗಗಳಿಂದ ಜನರ ಕರೆ
ನನಗೆ ಟಿಕೆಟ್ ಮೊದಲ, ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಅಗಬೇಕಿತ್ತು. ಯಾಕೆ ಆಗಿಲ್ಲ. ಯಾಕೆ ಹೈಕಮಾಂಡ್ ಈ ರೀತಿ ಮಾಡುತ್ತಿದೆ ಎಂದು ಹತ್ತಾರು ಪ್ರಶ್ನೆಗಳನ್ನು ಜನರು ಫೋನ್ ಮಾಡಿ ಕೇಳುತ್ತಿದ್ದಾರೆ.
ಟಿಕೆಟ್ ಘೋಷಣೆ ವಿಳಂಬ ಬರೀ ನನಗಷ್ಟೇ ಅಲ್ಲ ನಾಡಿನ ಜನರಿಗೂ, ಅಭಿಮಾನಿಗಳಿಗೂ ನೋವು ತಂದಿದೆ. ಇದನ್ನು ಹೈ ಕಮಾಂಡ್ ಅರ್ಥ ಮಾಡಿಕೊಂಡು ಟಿಕೆಟ್ ಘೋಷಣೆ ಮಾಡುವ ವಿಶ್ವಾಸವಿದೆ. ಇನ್ನೊಂದು ದಿನ ಕಾದು ನೋಡೋಣ ಎಂದು ಶೆಟ್ಟರ ಪುನರುಚ್ಛರಿಸಿದರು.