ರಾಜಕೀಯಂ ದ್ರೋಹ ಚಿಂತನಂ

Advertisement

ಪ್ರಾಕೃತಿಕ ವಿಕೋಪದ ಪರಿಣಾಮವಾಗಿ ಇಡೀ ಜಗತ್ತಿನಲ್ಲಿಯೇ ಜನ ಹಾಗೂ ಜಾನುವಾರುಗಳು ನಾನಾ ರೀತಿಯ ಪರಿಪಾಟಲಿಗೆ ಒಳಗಾಗಿರುವ ಸಂಗತಿ ಬಹಿರಂಗ ಗುಟ್ಟು. ಹವಾಮಾನದ ವೈಪರೀತ್ಯದ ಪರಿಣಾಮವಾಗಿ ಈ ಪ್ರಾಕೃತಿಕ ವಿಕೋಪದಲ್ಲಿ ಮಳೆ ಬೀಳದೇ ತೀವ್ರ ಬರಗಾಲ ಒಂದುಕಡೆ ಇದ್ದರೆ, ಬರಬಾರದ ರೀತಿಯಲ್ಲಿ ಮಳೆ ಸುರಿದು ನಿರೀಕ್ಷೆಗೂ ಮೀರಿದ ಪ್ರವಾಹಗಳಿಂದಾಗಿ ಜನರಿಗೆ ತೊಂದರೆಯಾಗಿರುವ ಸಂಗತಿಯೂ ಕೂಡಾ ಗುಟ್ಟೇನೂ ಅಲ್ಲ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇದೇ ಪ್ರಾಕೃತಿಕ ವಿಕೋಪದ ಇನ್ನೊಂದು ರೂಪವಾಗಿ, ಉರಿಬಿಸಿಲು ಬಿಸಿಗಾಳಿಯ ನಡುವೆ ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ಉಂಟಾಗಿರುವುದು ಕೆಲವರಿಗೆ ಒಗಟಾಗಿ ಕಂಡರೂ, ಇದು ಗುಟ್ಟಾಗಲು ಸಾಧ್ಯವೇ ಇಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ತಲೆದೋರಿರುವ ಸಂಗತಿಯನ್ನು ಮರೆಮಾಚಲು ಬರುವುದಿಲ್ಲ. ಹಾಗೆಯೇ ಕೇರಳದ ತಿರುವನಂತಪುರ ಸೇರಿ ಹಲವಾರು ಭಾಗಗಳಲ್ಲಿ ಇದೇ ರೀತಿಯ ಸ್ಥಿತಿ ಇರುವುದನ್ನು ಯಾರೊಬ್ಬರೂ ನಿರಾಕರಿಸಲು ಸಾಧ್ಯವಿಲ್ಲ. ಎಷ್ಟಾದರೂ ಇದು ಸಂಕಟದ ಕಾಲ. ಈ ಸಂಕಟದ ಕಾಲದಲ್ಲಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳಿ ಬದುಕುವುದು ಒಕ್ಕೂಟ ವ್ಯವಸ್ಥೆಯ ಧರ್ಮ. ಆದರೆ ಕೇರಳ ಸರ್ಕಾರದ ಧೋರಣೆಯೇ ಬೇರೆ ಇರುವಂತೆ ಕಾಣುತ್ತಿದೆ. ಮಾಹಿತಿ ತಂತ್ರಜ್ಞಾನದ ಕಂಪನಿಗಳು ಬಹುಸಂಖ್ಯೆಯಲ್ಲಿರುವ ಕಾರಣ ಕೇರಳ ಸರ್ಕಾರಕ್ಕೆ ಈ ಸ್ಥಿತಿಯನ್ನು ನೋಡಿ ಒಂದು ರೀತಿಯ ಹೊಟ್ಟೆಉರಿ ಇರಬೇಕು. ಹೀಗಾಗಿ ಬೆಂಗಳೂರು ಹಾಗೂ ಕರ್ನಾಟಕದ ಬೇರೆಡೆ ನೀರಿನ ಸಮಸ್ಯೆಯಿಂದ ಬಳಲುವ ಬದಲು ನಿಮ್ಮ ಕಂಪನಿಗಳ ಕಾರ್ಯಾಚರಣೆಗೆ ಅನುಕೂಲವಾದ ನೀರಿನಿಂದ ಹಿಡಿದು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿ ಕೊಡುವ ಆಹ್ವಾನವನ್ನು ಕೇರಳ ಸರ್ಕಾರದ ಪರವಾಗಿ ಕೈಗಾರಿಕಾ ಸಚಿವ ರಾಜೀವ ನೀಡಿರುವುದು ನಿಜವಾದ ಅರ್ಥದಲ್ಲಿ ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿರುವಂತೆ ರಾಜಕೀಯಂ ದ್ರೋಹ ಚಿಂತನಂ ಎನ್ನುವಂತಾಗಿದೆ.
ಎಷ್ಟಾದರೂ ಕೇರಳ ರಾಜ್ಯ ಕರ್ನಾಟಕದ ನೆರೆ ರಾಜ್ಯ. ಎರಡು ರಾಜ್ಯಗಳ ಸ್ಥಿತಿ ಬಹುತೇಕ ವಿಚಾರಗಳಲ್ಲಿ ಒಂದೇ ರೀತಿ ಇರುವುದು ಸಾಮಾನ್ಯ. ಹಾಗೊಮ್ಮೆ ಕೇರಳ ರಾಜ್ಯದಲ್ಲಿ ಸಮಸ್ಯೆಗಳು ತಲೆದೋರಿದಾಗ ಕರ್ನಾಟಕ ಈ ಹಿಂದೆ ನೆರವಿಗೆ ಧಾವಿಸಿರುವ ನಿದರ್ಶನಗಳು ಸಾಕಷ್ಟು. ಋಣ ಸಂದಾಯದ ಮಾತಿರಲಿ, ಪರೋಪಕಾರದ ಚಿಂತೆಯೂ ಹಾಗಿರಲಿ, ತಮ್ಮ ರಾಜ್ಯದ ಎಲೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನಿವಾರಿಸದೇ ಕರ್ನಾಟಕದ ಎಲೆಯಲ್ಲಿರುವ ನೊಣವನ್ನು ಭೂತಗನ್ನಡಿಯಲ್ಲಿ ನೋಡಿ ಐಟಿ ಕಂಪನಿಗಳಿಗೆ ಆಹ್ವಾನದ ಬುರುಡೆ ಬಿಡುವ ಕೇರಳದ ವರ್ತನೆ ಜೀವವಿರೋಧಿ. ಕರ್ನಾಟಕ ಸರ್ಕಾರದ ಪರವಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮುಟ್ಟಿ ನೋಡಿಕೊಳ್ಳುವ ಹಾಗೆ ಕೇರಳಕ್ಕೆ ತಿರುಗೇಟು ನೀಡಿರುವುದು ಒಪ್ಪತಕ್ಕ ನಡೆ. ಒಬ್ಬರ ಸಂಕಟದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಸಾಧನೆಯಾಗದು. ಇದೊಂದು ಅನುಕೂಲಸಿಂಧು ಮಾರ್ಗ. ರಾಜಕೀಯ ವೈಚಾರಿಕತೆಯ ಬಗ್ಗೆ ಬಾಯಿತುಂಬಾ ಮಾತನಾಡುವ ಕೇರಳ ಸರ್ಕಾರದ ಮಂತ್ರಿವರ್ಯರು ಹಾಗೂ ಮುಖಂಡರು ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಲೇವಡಿ ಮಾಡುವ ಧಾಟಿಯಲ್ಲಿ ಐಟಿ ಕಂಪನಿಗಳನ್ನು ಆಹ್ವಾನಿಸಿದ ಕ್ರಮದಲ್ಲಿ ಎದ್ದು ಕಾಣುವುದು ಸ್ವಾರ್ಥ ಹಾಗೂ ಕಡು ಲೋಭಿತನ.
ದೇಶ ವಿದೇಶಗಳ ಐಟಿ ಕಂಪನಿಗಳು ಕರ್ನಾಟಕದಲ್ಲಿ ಯಾವ ಕಾರಣದ ಮೇರೆಗೆ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂಬುದನ್ನು ಕೇರಳ ಸರ್ಕಾರ ಮೊದಲು ಅಧ್ಯಯನ ಮಾಡಬೇಕು. ಅಮೆರಿಕದ ಪ್ರತಿಷ್ಠಿತ ಕಂಪನಿಗಳಿಗೆ ಬೆಂಗಳೂರು ತವರು ಮನೆಯಂತೆ ಕಾಣಲು ಇಲ್ಲಿ ದೊರಕುವ ಮಾನವೀಯ ಸಂಪನ್ಮೂಲ ಹಾಗೂ ಶಾಂತಿ ನೆಮ್ಮದಿಯ ವಾತಾವರಣ. ಕರ್ನಾಟಕದಲ್ಲಿ ಕೆಲವು ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ಶಾಂತಿ ನೆಮ್ಮದಿಯ ತವರು. ಇದೇ ಮಾತನ್ನು ಕೇರಳದ ಬಗ್ಗೆ ಯಾರೊಬ್ಬರೂ ಹೇಳುವಂತಿಲ್ಲ. ದಿನನಿತ್ಯ ರಾಜಕೀಯ ಘರ್ಷಣೆಗಳಿಗೆ ತಾಣವಾಗಿರುವ ಈ ನೆರೆರಾಜ್ಯದ ರಾಜಕೀಯ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಮುಖ್ಯಮಂತ್ರಿಗಳಿಗೂ ಹಾಗೂ ರಾಜ್ಯಪಾಲರಿಗೂ ಮುಖ ಕೊಟ್ಟು ಮಾತನಾಡದಂತಹ ಸ್ಥಿತಿ ಇರುವುದು ದೇಶಕ್ಕೆ ಗೊತ್ತಿರದ ಗುಟ್ಟಂತೂ ಅಲ್ಲ. ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರ ವಿರುದ್ಧವೇ ಸುಪ್ರೀಂಕೋರ್ಟಿನ ಮೆಟ್ಟಿಲು ಹತ್ತುವ ಮಟ್ಟಕ್ಕೆ ಹೋಗುವ ಕೇರಳ ರಾಜ್ಯದಿಂದ ಮಾರ್ಗದರ್ಶನ ಪಡೆಯುವಂತಹ ದುಸ್ಥಿತಿ ಕರ್ನಾಟಕಕ್ಕೆ ಬಂದಿಲ್ಲ ಎಂಬುದನ್ನು ಕೇವಲ ರಾಜಕೀಯ ಚಟುವಟಿಕೆ ಆಧರಿಸಿ ಹೇಳುವಂತದ್ದಲ್ಲ. ಕರ್ನಾಟಕ ಒಂದು ಸಂವೇದನಾಶೀಲ ರಾಜ್ಯ. ಆದರೆ ಕೆಲವರು ಭಾವಿಸುವಂತೆ ಕೇರಳ ಒಂದು ವೇದನಾಶೀಲ ರಾಜ್ಯ, ಇಂತಹ ವ್ಯತ್ಯಾಸದ ನಡುವೆಯೂ ಐಟಿ ಕಂಪನಿಗಳ ಸೆಳೆಯುವ ಕೇರಳದ ಆಟ ಕೇವಲ ಹುಡುಗಾಟವಷ್ಟೇ.