ಸುನಾದದ ಮೂಲಕ ಶಬ್ದಗಳ ಮಿತಿಯನ್ನು ಮೀರಿ ಅನಂತದ ಅನುಭವ ಕೊಡುವುದು ಸಂಗೀತ. ಮಾತು ಅರ್ಥ ಕಳೆದುಕೊಂಡಾಗ ಪದ್ಯ ಹೊಸ ಅರ್ಥಗಳನ್ನು ಧ್ವನಿಸುವ ರೀತಿಯಲ್ಲಿ ಪದ್ಯಗಳ ಭಾವವನ್ನು ಮೀರಿ ಬದುಕಿನ ಸಾರ್ಥಕತೆ ಹಾಗೂ ಅನಂತತೆಯನ್ನು ಪ್ರತಿಧ್ವನಿಸುವ ಸಂಗೀತ ಅರ್ಥವಾಗದಿದ್ದವರಿಗೂ ಅದರ ರಾಗ ತಾಳ ಪಲ್ಲವಿಗಳ ಮೇಲೆ ಏನೋ ಒಂದು ರೀತಿಯ ಆಕರ್ಷಣೆ. ಸಾಮವೇದದ ಮೂಲಕ ಸೃಷ್ಟಿಯಾಗಿರುವ ಸಂಗೀತ ಲೋಕದಲ್ಲಿ ಈಗ ತಮಿಳುನಾಡಿನ ಕಡೆಯಿಂದ ಸೃಷ್ಟಿಯಾಗಿರುವ ವಿವಾದಕ್ಕೆ ವೈಚಾರಿಕತೆಯ ಜೊತೆಗೆ ವ್ಯಕ್ತಿಗತ ಅಹಮಿಕೆ ಕಾರಣ. ಸಮಕಾಲೀನ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರು ಮಾಡಿರುವ ಸುಪ್ರಸಿದ್ಧ ಗಾಯಕ ಟಿ.ಎಂ. ಕೃಷ್ಣ ಅವರಿಗೆ ಮದರಾಸಿನ ಮ್ಯೂಸಿಕ್ ಅಕಾಡೆಮಿ ೨೦೨೪ನೆಯ ಸಾಲಿನ ಸಂಗೀತ ಕಲಾನಿಧಿ ಗೌರವವನ್ನು ನೀಡಿರುವುದು ಜೇನುಗೂಡಿಗೆ ಕೊಳ್ಳಿ ಇಟ್ಟಂತಹ ವಾತಾವರಣವನ್ನು ಸೃಷ್ಟಿಸಿದೆ. ಟಿ.ಎಂ. ಕೃಷ್ಣ ಅವರ ಗಾಯನ ಸಾಮರ್ಥ್ಯ ಇಲ್ಲವೇ ಸಂಗೀತದ ಜ್ಞಾನದ ಬಗ್ಗೆ ಯಾರೊಬ್ಬರಿಗೂ ತಕರಾರಿಲ್ಲ. ಹೊಸ ಪ್ರಯೋಗಗಳ ಹರಿಕಾರ ಎಂಬ ಗುಣಗಾನವನ್ನು ಎಲ್ಲಾ ಸಂಗೀತಗಾರರು ಮಾಡುವ ಸಂದರ್ಭದಲ್ಲಿಯೇ ಈ ವಿವಾದ ಭುಗಿಲೇಳಲು ಮುಖ್ಯ ಕಾರಣ ಕೃಷ್ಣ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಮಡಿ ಮೈಲಿಗೆಯ ಗುಣಾತ್ಮಕ ವ್ಯತ್ಯಾಸವನ್ನು ಕಿತ್ತೆಸೆಯಬೇಕಾದ ಅಗತ್ಯವನ್ನು ಬಹಿರಂಗ ಸಭೆ ಹಾಗೂ ಲೇಖನಗಳ ಮೂಲಕ ಪ್ರಸ್ತಾಪಿಸಿರುವುದು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರ ಪೈಕಿ ಹೆಚ್ಚಿನವರು ಬ್ರಾಹ್ಮಣ ಸಮುದಾಯದವರು. ಕೃಷ್ಣ ಅವರ ಅಭಿಪ್ರಾಯಗಳು ಬ್ರಾಹ್ಮಣ ಸಮುದಾಯದ ಹಲವಾರು ಮಂದಿಗೆ ತೃಪ್ತಿ ನೀಡಿಲ್ಲ. ಹೀಗಾಗಿ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಗೌರವ ನೀಡಿರುವುದನ್ನು ಪ್ರತಿಭಟಿಸಿ ಸುಪ್ರಸಿದ್ಧ ಸಂಗೀತಗಾರರಾದ ತ್ರಿಚೂರು ಸೋದರರು, ಗಾಯತ್ರಿ ರಂಜಿನಿ ಮೊದಲಾದವರು ಈ ಹಿಂದೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನೀಡಿದ್ದ ಗೌರವವನ್ನು ಹಿಂತಿರುಗಿಸುವ ಮೂಲಕ ವಿವಾದದ ಮೃದಂಗವನ್ನು ಬಡಿದಿರುವುದು ಒಂದು ರೀತಿಯಲ್ಲಿ ಸಂಗೀತ ಕ್ಷೇತ್ರದ ಮುಕ್ತ ಚರ್ಚೆಗೆ ಗ್ರಾಸವಾಗಿದೆ.
ಕೃಷ್ಣ ಅವರು ಹಲವಾರು ವೇದಿಕೆಗಳ ಮೂಲಕ ಯಥಾಸ್ಥಿತಿಯ ಮನೋಧರ್ಮವನ್ನು ಪ್ರಶ್ನಿಸುತ್ತಲೇ ಪ್ರಯೋಗಕ್ಕೆ ಮುಂದಾಗಬೇಕಾದ ಅಗತ್ಯವನ್ನು ಒತ್ತಿಹೇಳಿರುವುದು ಗಮನಿಸಬೇಕಾದ ಸಂಗತಿ. ಭಾರತ ಸಂಗೀತ ಲೋಕದಲ್ಲಿ ಸ್ಪಷ್ಟ ಹೆಜ್ಜೆ ಗುರುತನ್ನು ಮೂಡಿಸಿರುವ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಗಾಯನದಲ್ಲಿ ಶಾರೀರದ ಸುಸ್ವರವನ್ನು ಬಿಟ್ಟರೆ ಹಾಡಿಕೆಯಲ್ಲಿ ಯಾವುದೇ ಗಟ್ಟಿತನವಾಗಲೀ ಇಲ್ಲವೇ ಹೊಸತನವಾಗಲೀ ಇಲ್ಲ ಎಂಬ ನಿರ್ದಾಕ್ಷಿಣ್ಯ ಮಾತನ್ನು ಕೃಷ್ಣ ಈ ಹಿಂದೆಯೇ ಆಡಿದ್ದರು. ಹಾಗೆಯೇ ಕರ್ನಾಟಕ ಸಂಗೀತದ ವಾಗ್ಗೇಯಕಾರ ತ್ಯಾಗರಾಜರ ಕೃತಿಗಳ ಪೂರ್ವಾಪರಗಳನ್ನು ಕೂಡಾ ಪ್ರಶ್ನಿಸುವ ಧಾಟಿಯಲ್ಲಿ ಟೀಕಿಸಿದ್ದರು. ಸಹಜವಾಗಿಯೇ ಕೃಷ್ಣ ಅವರ ಈ ನಿಲುವು ಸಂಗೀತ ಲೋಕದಲ್ಲಿ ವಿವಾದದ ಅಲೆಗಳನ್ನು ಸೃಷ್ಟಿಸಿತ್ತು. ಚರ್ಮ ವಾದ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೆಬಾಸ್ಟಿಯನ್ ಅಂಡ್ ಸನ್ಸ್ ಎಂಬ ಕೃತಿಯಲ್ಲಿ ಚರ್ಮವಾದಗಳ ತಯಾರಕರನ್ನು ಮೃದಂಗ, ತಬಲ, ಖಂಜರ ಮೊದಲಾದ ವಾದ್ಯಗಳ ವಾದಕರು ಜಾತಿಯ ಆಧಾರದ ಮೇರೆಗೆ ಯಾವ ರೀತಿಯಲ್ಲಿ ದೂರ ಇಡುತ್ತಿದ್ದರು ಎಂದು ಪ್ರಸ್ತಾಪಿಸಿದ್ದ ಅಂಶ ತಮಿಳುನಾಡಿನಲ್ಲಿ ಸಂಪ್ರದಾಯವಾದಿಗಳಲ್ಲಿ ಕಿಚ್ಚೆಬ್ಬಿಸಿತ್ತು. ಒಂದು ಹಂತದಲ್ಲಿ ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿ ನಾಯಕರ್ ವೈಚಾರಿಕತೆಯ ಪ್ರತಿಪಾದಕರಂತೆ ಸಂಪ್ರದಾಯವಾದಿಗಳಿಗೆ ಕೃಷ್ಣ ಕಂಡಿದ್ದರು. ಇಂತಹ ಒಬ್ಬ ವ್ಯಕ್ತಿಗೆ ಈಗ ಪ್ರತಿಷ್ಠಿತ ಅಕಾಡೆಮಿಯ ಗೌರವ ದೊರಕಿರುವುದು ಸತ್ಯ ಮತ್ತು ಸತ್ವಕ್ಕೆ ಬಗೆದ ಅಪಚಾರ. ಸಂಗೀತ ಲೋಕದ ಪಾವಿತ್ರ್ಯತೆಗೆ ಭಂಗ ತರುತ್ತಿರುವ ಇಂತಹ ಬೆಳವಣಿಗೆಗಳನ್ನು ನೋಡಿಕೊಂಡು ಸುಮ್ಮನಿರಲು ಆಗುವುದಿಲ್ಲ. ಹೀಗಾಗಿ ನಮ್ಮ ಪ್ರಶಸ್ತಿಗಳನ್ನು ಈಗ ವಾಪಸ್ ಕೊಡುತ್ತಿದ್ದೇವೆ ಎಂದು ಸವಾಲಿನ ಧಾಟಿಯಲ್ಲಿ ಕೃಷ್ಣ ವಿರೋಧಿಗಳು ಮುಂದಾಗಿರುವುದು ಸಾಂಸ್ಕೃತಿಕ ಲೋಕದಲ್ಲಿ ವರ್ಗಸಂಘರ್ಷದ ಜೊತೆಗೆ ವ್ಯಕ್ತಿ ಸಂಘರ್ಷವೂ ಭುಗಿಲೇಳಲು ಪ್ರಾರಂಭವಾಗಿದೆ.
ಸಾಂಸ್ಕೃತಿಕ ಕ್ಷೇತ್ರ ಹೊಸತನ್ನು ಆಹ್ವಾನಿಸಿಕೊಳ್ಳುವ ಕ್ಷೇತ್ರ. ಪ್ರಯೋಗವಂತಿಕೆ ಈ ಕ್ಷೇತ್ರದ ಹೆಗ್ಗಳಿಕೆ. ಆದರೆ, ಈ ಪ್ರಯೋಗವಂತಿಕೆಯಲ್ಲಿ ಸಾಮಾಜಿಕ ಪರಿಸ್ಥಿತಿಯನ್ನು ತುಲಾಭಾರ ಮಾಡದೆ ವ್ಯಕ್ತಿಗತವಾಗಿ ಪ್ರಯೋಗದ ಹೆಸರಿನಲ್ಲಿ ಹೊಸ ವಾದಗಳನ್ನು ಮಂಡಿಸಿದರೆ ವಿವಾದಗಳು ಕಟ್ಟಿಟ್ಟ ಬುತ್ತಿ. ಸಂಗೀತ ಲೋಕದಲ್ಲಿ ರಾಗ ತಾಳ ಪಲ್ಲವಿಯ ಬಗ್ಗೆ ಜಿಜ್ಞಾಸೆಗಳು ಎದ್ದರೆ ಅದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಸಂಗೀತ ಲೋಕದಲ್ಲಿ ರಾಜಕೀಯ ಎಳೆಗಳ ಮೂಲಕ ಬೆಳೆಯನ್ನು ನಿರೀಕ್ಷಿಸಿ ಪ್ರಯೋಗಿಸಿದಾಗ ಇಡೀ ರಸಿಕರೇ ಪ್ರಯೋಗಪಶುಗಳಾಗುವ ಅಪಾಯವನ್ನು ಗುರುತಿಸುವುದು ಮೇಧಾವಿ ಕಲಾವಿದರ ಸಾಂಸ್ಕೃತಿಕ ಜವಾಬ್ದಾರಿ.