ಕುಷ್ಟಗಿ: ತಾಲೂಕಿನ ದೋಟಿಹಾಳ ಮಾರ್ಗವಾಗಿ ಇಳಕಲ್ ಪಟ್ಟಣಕ್ಕೆ ಸಂಪರ್ಕಿಸುವ ದೋಟಿಹಾಳ ರಸ್ತೆ ಮಧ್ಯೆದಲ್ಲಿ ಐದು ಮೀಟರ್ ಅಡಿಯಷ್ಟು ರಸ್ತೆ ನಿರ್ಮಾಣ ಮಾಡದೆ ಹಾಗೆ ಬಿಟ್ಟಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗಿದೆ ಎಂದು ಕೆಲ ಸಂಘಟನೆಗಳು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಮಾಜಿ ಶಾಸಕ ಹಸನಸಾಬ ದೋಟಿಹಾಳ ಯಲಬುರ್ಗಿ ಅವರನ್ನು ರಸ್ತೆಯಲ್ಲಿ ಕಾರು ತಡೆದು ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಕಳೆದ ಐದು ವರ್ಷಗಳ ಹಿಂದೆ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕೊಪ್ಪಳ-ಕ್ಯಾದಗುಂಪಿ ವರೆಗೂ ರಸ್ತೆ ನಿರ್ಮಾಣ ಮಾಡಲಾಗಿದ್ದು. ಆದರೆ ದೋಟಿಹಾಳ ಮಧ್ಯ ಭಾಗದಲ್ಲಿರುವಂತಹ ರಸ್ತೆಯನ್ನು ಅಭಿವೃದ್ಧಿ ಮಾಡುವ ಬದಲು ಹಾಗೆ ಬಿಟ್ಟಿದ್ದು ಬೃಹತ್ ಗಾತ್ರದ ತೆಗ್ಗು ಬಿದ್ದಿದ್ದು ಸರಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಕೂಡ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಹಾಗೂ ಕೃಷಿಕ ಸಮಾಜ ನವದೆಹಲಿಯ ಪದಾಧಿಕಾರಿಗಳು ರಸ್ತೆಯಲ್ಲಿಯೇ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.