ಬರಗಾಲದ ಕ್ರೂರ ಛಾಯೆ ದಟ್ಟವಾಗಿದೆ. ರೈತರ ಆತ್ಮಹತ್ಮೆ, ಕೂಳಿಗಾಗಿ ಗುಳೆ, ಜೀವ ಹಿಡಿದಿಟ್ಟುಕೊಳ್ಳಲು ಅಡ್ಡಕಸಬು, ಜನ ಜಾನುವಾರುಗಳ ನಿತ್ಯ ನರಕ.
ಇದೇ ಕರ್ಣ ಕಠೋರವಾದ ಸುದ್ದಿ ಕ್ಷಣಕ್ಷಣಕ್ಕೂ ಕೇಳಿ ಬರುತ್ತಿದ್ದರೆ ದಮ್ಮು-ತಾಕತ್ತು-ಜಿಂದಾಬಾದ್-ಮುರ್ದಾಬಾದ್ ಘೋಷಣೆಗಳಲ್ಲಿಯೇ, ಸವಾಲ್- ಜವಾಬುಗಳಲ್ಲಿಯೇ ಆಳುವ ಪ್ರತಿನಿಧಿಗಳು, ಸರ್ಕಾರ ಕಾಲ ಹರಣ ಮಾಡುತ್ತಿದೆ.
ಪ್ರಶ್ನೆ ಏಳುವುದು, ಜನ ನರಳುತ್ತಿದ್ದರೂ, ಸಾವಿನ ಮನೆ ಕದ ತಟ್ಟುತ್ತಿದ್ದರೂ ಈ ಸರ್ಕಾರಗಳಿಗೆ ಗಂಭೀರತೆಯೇ ಇಲ್ಲವೇ? ಎನ್ನುವುದು.
ನಿಜ. ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳ ಪ್ರಕಾರ, ಕಳೆದ ಹತ್ತು ತಿಂಗಳುಗಳಲ್ಲಿ ಏಳುನೂರ ಹನ್ನೆರಡು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಕೃಷಿ ಕೂಲಿ ಕಾರ್ಮಿಕರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿಲ್ಲ!. ಅಂದರೆ ನಿತ್ಯ ನಾಲ್ಕೈದು ಮಂದಿ ಅನ್ನದಾತರು ಜೀವ ಕಳೆದುಕೊಳ್ಳುತ್ತಿದ್ದಾರೆ!
ಕಾರಣ ಹಲವು. ಸಾಲ-ಸೋಲ, ಬೆಳೆಗಾಗಿ ಮಾಡಿರುವ ಸಾಲ ತೀರಿಸಲಾಗದೇ ಮಾನ ಮರ್ಯಾದೆ, ಭೂಮಿ ಹರಾಜು, ಆಸ್ತಿಪಾಸ್ತಿ ಜಪ್ತಿ, ಇತ್ಯಾದಿಗಳಿಂದ ಅವಮಾನಿತರಾದವರೇ ಹೆಚ್ಚು. ಬದುಕೇ ಸಾಗಿಸಲಾಗದು ಎಂದು ಹತಾಶೆಗೊಂಡು ಮೃತಪಟ್ಟವರು ಹಲವರು. ಕುಟುಂಬದ ನಿರ್ವಹಣೆ ಅಸಾಧ್ಯ ಎಂದು ತಲೆಕೊಟ್ಟ ರೈತ ಯಜಮಾನರು ಅನೇಕ.
ತಮ್ಮ ಜೀವ ಹಿಡಿದಿಟ್ಟುಕೊಳ್ಳುವುದೇ ಕಷ್ಟಸಾಧ್ಯವೆಂದು ಸಿಕ್ಕ ಬೆಲೆಗೆ ಕಸಾಯಿ ಖಾನೆಗೆ ಜಾನುವಾರು ಕಳಿಸುತ್ತಿರುವುದು ಒಂದೆಡೆಯಾದರೆ, ಎಲ್ಲಿಯಾದರೂ ಬದುಕೋಣ ಎಂದು ನೀರಿದ್ದ ಕಡೆ, ಕೈಗೆ ಕೆಲಸ ದೊರೆಯುವ ಊರಿಗೆ ಗುಳೆ ಹೊರಟವರು ಲಕ್ಷಾಂತರ ಮಂದಿ. ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಯಂತೆ ಒಂಬತ್ತು ಸಾವಿರಕ್ಕೂ ಅಧಿಕ ಮಕ್ಕಳು ತಮ್ಮ ಶಾಲೆ ಮೊಟಕುಗೊಳಿಸಿ ಪಾಲಕರೊಟ್ಟಿಗೆ ಗುಳೆಯೂರಿ'ಗೆ ಹೋಗಿದ್ದಾರೆ. ಕರ್ನಾಟಕದಲ್ಲಿ ಒಂದೇ ಕೆಟ್ಟ ಸ್ಥಿತಿಯಲ್ಲವಿದು. ಬಹುತೇಕ ರಾಜ್ಯಗಳ ದುಸ್ಥಿತಿ ಇದು. ಎಲ್ಲಿ ವಿಫಲವಾದವು ಈ ಸರ್ಕಾರಗಳು? ಕಳೆದ ಹದಿನೈದು ವರ್ಷಗಳಲ್ಲಿ ಜಾರಿಗೆ ತಂದ ಯಾವ ಯೋಜನೆಗಳೂ ಈ ದಾರುಣ ಪರಿಸ್ಥಿತಿಯಿಂದ ಜನಜೀವನವನ್ನು ಪಾರು ಮಾಡುವಲ್ಲಿ ವಿಫಲವಾದವೇ? ಅಥವಾ ಇಂತಹ ಭೀಕರ ಕ್ಷಾಮ ಡಾಮರುಗಳು ಉದ್ಭವಿಸಿದಾಗ ಜನರ ಬದುಕು ಬವಣೆ ಆಲಿಸುವ, ಪರಿಹರಿಸುವ ಯೋಜನೆ- ಯೋಚನೆ, ಅಂತಹ ಸರ್ಕಾರ, ಇಚ್ಛಾಶಕ್ತಿ, ಮನೋಬಲ ಯಾವುವೂ ಇಲ್ಲದಂತಾಯಿತೇ? ಯಾರು ಬಂದೀರಿ ನಮ್ಮ ನೆರವಿಗೆ? ಎನ್ನುವುದೇ ಈಗ ಜನರ ಪ್ರಶ್ನೆ. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಿಂತರೆ, ರಾತ್ರಿ ಹಗಲೆನ್ನದೇ ಮಂಗಳೂರು, ಉಡುಪಿ, ಗೋವಾ, ಕರಾವಳಿ ನಗರಗಳ ಬಸ್ಸುಗಳಲ್ಲಿ ಜನ ನೂಕುನುಗ್ಗಲಿನಂತೆ ತುಂಬಿರುತ್ತಾರೆ. ಅಡುಗೆ ಸಾಮಾನು, ರೊಟ್ಟಿ, ದಿನಸಿ-ಧಾನ್ಯಗಳೊಂದಿಗೆ ಕಂಕುಳಲ್ಲಿ ನಾಲ್ಕಾರು ತಿಂಗಳ ಮಗುವನ್ನಿಟ್ಟುಕೊಂಡು ಗುಳೆ ಹೋಗುವ ದೃಶ್ಯ ದಾರುಣವಾದದ್ದು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಈಗ ವೃದ್ಧರು, ಅಸಹಾಯಕರು ಮಾತ್ರ ಇದ್ದಾರೆ. ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿವೆ. ಶಾಲೆಗಳ ಹಾಜರಾತಿ ಕಡಿಮೆಯಾಗಿದೆ. ಪರೀಕ್ಷೆ ಸಮೀಪಿಸುತ್ತಿದೆ. ಬರೆಯಿರಿ ಎಂದರೆ, ಬಿಸಿಯೂಟವನ್ನೂ ತಿರಸ್ಕರಿಸಿ ಮಕ್ಕಳು ಪಾಲಕರೊಟ್ಟಿಗೆ ತೆರಳಿದ್ದಾರೆ. ಇದ್ದ ಊರಿನಲ್ಲೇ ಕೆಲಸ ಮಾಡೋಣ ಎಂದರೆ ಮನರೇಗಾದ ಕೂಲಿ ಮೂರು ತಿಂಗಳಿಂದ ಬಂದಿಲ್ಲ. ಮತ್ತೆ ಕೆಲಸವಿಲ್ಲ! ಮಾರ್ಚ್-ಏಪ್ರಿಲ್ ಅಂತ್ಯಕ್ಕೆ ಸೊಸೈಟಿ, ಬ್ಯಾಂಕುಗಳ ನೋಟಿಸ್‌ಗಳದ್ದೇ ಈಗ ಭಯ. ಕೃಷಿ-ಹೊಲ ನಂಬಿ ಟ್ರ್ಯಾಕ್ಟರ್ ಯಂತ್ರೋಪಕರಣ ಖರೀದಿಸಿದವರು ಸಾಲ ತುಂಬಲಾಗದೇ ರೈಲಿನ ಹಳಿಗೆ ತಲೆಯೊಡ್ಡುತ್ತಿದ್ದಾರೆ. ಟ್ರ್ಯಾಕ್ಟರ್‌ಗಳು ಜಪ್ತಾಗುತ್ತಿವೆ. ಅಲ್ಪ ಸ್ವಲ್ಪ ಬಂದ ಬೆಳೆಗೂ ಬೆಲೆ ಇಲ್ಲ. ಕೊಬ್ಬರಿಯದೇ ಕಥೆ ನೋಡಿ. ಬೆಂಬಲ ಬೆಲೆ ಘೋಷಿಸಿದರೂ ನಾಫೆಡ್ ಹಿಂದೇಟು ಹಾಕುತ್ತಿದೆ. ಗ್ರಾಮೀಣ ಜನರಿಗೆ ಜೀವ ಹಿಡಿದಿಟ್ಟುಕೊಳ್ಳುವ ಸಮಸ್ಯೆಯಾದರೆ, ಅತ್ತ ಚುನಾವಣೆಯ ಟೀಕೆ ಟಿಪ್ಪಣಿಗಳಿಗಿಂತಲೂ ಜಾಸ್ತಿಯಾಗಿ ಗ್ಯಾರಂಟಿಗಳ ಸಮರ. ಜಾತಿ ಸಮಾವೇಶ. ಹೌದು. ಏನಾದವು ಸರ್ಕಾರಿ ಯೋಜನೆಗಳು? ಮನರೇಗಾ ಯೋಜನೆ ಕೂಲಿ ಮೂರು ತಿಂಗಳಿಂದ ಬಂದಿಲ್ಲ. ರಾಜ್ಯ ಸರ್ಕಾರ ಕೇಳಿದರೆ ಕೇಂದ್ರದತ್ತ ಬೊಟ್ಟು. ಕೇಂದ್ರ ಸರ್ಕಾರಕ್ಕೋ ರೈತ ಚಳವಳಿಯನ್ನು ಹತ್ತಿಕ್ಕುವುದು ಹೇಗೆನ್ನುವುದರ ಬಗ್ಗೆಯೇ ಯೋಚನೆ! ಐವತ್ತು ಸಾವಿರ, ಲಕ್ಷ, ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ನಿತ್ಯವೂ ಘೋಷಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ರೈತ ಕೂಲಿ ಕಾರ್ಮಿಕ ದುಡಿದ ಹಣ ಕಾನೂನುಬದ್ಧವಾಗಿ ನೀಡುತ್ತಿಲ್ಲ. ನೂರು ದಿನಕ್ಕೆ ಸೀಮಿತವಾಗಿದ್ದ ಕೂಲಿಯನ್ನು ೧೫೦ ದಿನಕ್ಕೆ ಮಾಡಿಕೊಡಿ ಎಂದು ಎಲ್ಲ ರಾಜ್ಯಗಳು ಗೋಗರೆದರೂ ಊಹುಂ. ಏಕರೂಪ ನಾಗರಿಕ ಸಂಹಿತೆ, ಇಡಿ, ರಾಜಕೀಯ ವಾಗ್ದಾಳಿಗಳು, ಆಪರೇಷನ್ ಮತ್ತು ಸರ್ಕಾರಗಳನ್ನು ಉರುಳಿಸುವುದು, ಪ್ರತಿಷ್ಠಾಪಿಸುವುದು, ಲೋಕಸಭಾ ಟಿಕೆಟ್ ಇವುಗಳಿಗೆ ಪ್ರಾತಿನಿಧ್ಯ ಇರುವಾಗ ಬಡ ರೈತನ ಗೋಳು ಕೇಳುವವರು ಯಾರು? ಬರ ಏನೂ ಹೊಸತಲ್ಲ. ಈ ನಾಡಿಗೆ, ಈ ದೇಶಕ್ಕೆ. ಅದನ್ನು ನಿಭಾಯಿಸುವ ಯೋಜನೆಗಳೂ ಸಾಕಷ್ಟಿವೆ. ಹಲವಾರು ತಜ್ಞರ ವರದಿಗಳಿವೆ. ಮೊನ್ನೆ ಮೊನ್ನೆ ಭಾರತ ರತ್ನ ಘೋಷಿಸಿದ ಎಂ.ಎಸ್ ಸ್ವಾಮಿನಾಥನ್ ವರದಿಯಂತೂ ರೈತಾಪಿ ಜನರಿಗೆ ಹೊಸ ಬೆಳಕು ನೀಡುವ, ಹೊಸ ಬದುಕು ಹಚ್ಚಿಸುವ ವರದಿ. ಭಾರತ ರತ್ನವನ್ನೇನೋ ಅವರಿಗೆ ಕೊಟ್ಟರು. ಆದರೆ ಸ್ವಾಮಿನಾಥನ್ ಕೊಟ್ಟ ವರದಿಯ ಅನುಷ್ಠಾನ ಮಾತ್ರ ಬೇಕಿಲ್ಲ. ಐದು ವರ್ಷಗಳಲ್ಲಿ ರೈತರ ಉತ್ಪನ್ನಗಳನ್ನು ದ್ವಿಗುಣಗೊಳಿಸುವ ಆಶ್ವಾಸನೆ ನೆನಪಿಸಿಕೊಳ್ಳುತ್ತಿಲ್ಲ. ಪ್ರಶ್ನಿಸಿದರೆ ದೇಶದ್ರೋಹಿ. ರೈತರಿಗಾಗಿ ಹೋರಾಡಿದರೆ ಆತ ಖಲಿಸ್ತಾನಿ, ಪಾಕಿಸ್ತಾನಿ. ಆಮ್ ಆದ್ಮಿ ಇತ್ಯಾದಿ. ಈ ಅಪನಂಬಿಕೆ ಏಕೋ..? ಕನಿಷ್ಠ ಪ್ರದತ್ತವಾಗಬೇಕಾದಂತಹ ನರೇಗಾದಂತಹ ಅನುದಾನಗಳನ್ನು ಒಕ್ಕೂಟ ವ್ಯವಸ್ಥೆಯಡಿ ಶಾಸನಬದ್ಧವಾಗಿ ನೀಡಲಾಗದೇ? ಯಾಕೆ ಕೊಡುತ್ತಿಲ್ಲ ಅನುದಾನ? ದಮ್ಮು ತಾಕತ್ತು ಪ್ರಶ್ನೆ ಎದ್ದಾಗ, ಅದ್ಯಾವುದೋ ಕ್ರಿಮಿನಲ್ ಆರೋಪಿಗಳನ್ನು ಬಂಧಿಸಿ ತೋರಿಸಿ ಎನ್ನುವ ಸವಾಲುಗಳು! ಜನರ ಬದುಕು, ನೀರು, ಗುಳೆ, ಮೇವಿಗಾಗಿ ಹಾಹಾಕಾರ ಇಂತಹ ಪ್ರಶ್ನೆಗಳು ಎದ್ದಾಗ ವಿಧಾನಸೌಧದಲ್ಲಿ ಪಾಕಿಸ್ತಾನ್ ಘೋಷಣೆ, ಸಮೀಪ ಬಾಂಬ್ ದಾಳಿ ಇತ್ಯಾದಿಗಳತ್ತ ರಾಜ್ಯ ಪ್ರತಿಪಕ್ಷದ ನಾಯಕರು ಗಮನ ಸೆಳೆಯುತ್ತಾರೆ! ಹೌದು. ಸರ್ಕಾರಿ ಯೋಜನೆಗಳು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾದವು ಎನ್ನುವುದನ್ನು ನೋಡಿ. ಯಾವ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಕಾರ್ಡ್ನೊಟ್ಟಿಗೆ ರೈತರು, ಕೂಲಿಕಾರರು ಹೋದರೆ ತಿರಸ್ಕಾರ. ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಈ ಯಾವುವೂ ಲಭ್ಯವಾಗುತ್ತಿಲ್ಲ. ಹೋಗಲಿ. ನರೇಗಾ ಕೂಲಿ ದಿನಕ್ಕೆ ಕೇವಲ ೩೧೯ ರೂಪಾಯಿ ಸಕಾಲದಲ್ಲಿ ಸಿಗುತ್ತಿಲ್ಲ. ಬೆಳೆನಾಶವಾದರೂ ವಿಮೆ ಪರಿಹಾರ ದೊರೆಯುತ್ತಿಲ್ಲ! ಇದೇ ಕಾರಣಕ್ಕಾಗಿ ಕಾಫಿ, ಅಡಿಕೆ, ಬಂದರು, ಕಟ್ಟಡ ನಿರ್ಮಾಣ ಇತ್ಯಾದಿಗಳ ಕೆಲಸಕ್ಕೆ ೫೦೦ ರೂಪಾಯಿಯಾದರೂ ಕೂಲಿ ಸಿಗುತ್ತದೆ ಎಂದು ಮನೆ ತೊರೆದು ಹೋಗುತ್ತಿರುವುದು. ಹಾಗೆ ನೋಡಿದರೆ ಮನರೆಗಾ ಇಂತಹ ಭೀಕರ ಸ್ಥಿತಿಯಲ್ಲಿ ಕೈಹಿಡಿಯಬೇಕಾಗಿದ್ದ, ದುಡಿಮೆ ನೀಡಿ ಬದುಕಿಸಬೇಕಾದ ಯೋಜನೆ. ಜಲಜೀವನ ಮಿಷನ್ ಎಂದು ಸಮೃದ್ಧಿಯ ನೀರು ಒದಗಿಸುವ ಯೋಜನೆ ಘೋಷಿತವಾಗಿದೆ. ಪ್ರಧಾನಿಯ ಕೈಬೊಗಸೆಯಡಿ ನೀರು ಹಿಡಿಯುವ ಈ ಯೋಜನೆ ಯಾವ ಗ್ರಾಮದ ನಲ್ಲಿಗಳಲ್ಲಿಯೂ ನೀರು ತೊಟ್ಟಿಕ್ಕುತ್ತಿಲ್ಲ. ಕೃಷಿ ಸಾಲ ಕೇಳಲು ಹೋದರೆ ಬ್ಯಾಂಕು ಸೊಸೈಟಿಗಳು ಈಗ ಬಾಗಿಲು ಮುಚ್ಚುತ್ತಿವೆ. ಜಪ್ತಿ ನೋಟಿಸ್‌ನ ಕಾಲದಲ್ಲಿ ಯಾರು ಸಾಲ ಕೊಟ್ಟಾರು? ಸರ್ಕಾರವೇ ತಂದಿರುವ ಲೇವಾದೇವಿ ಕಾಯಿದೆ ನಿಶ್ಯಕ್ತವಾಗಿವೆ. ಈಗ ಆತ್ಮಹತ್ಯೆಗೆ ಕಾರಣ ಮೂವತ್ತಾರು, ನಲವತ್ತು ಪರ್ಸೆಂಟ್ ಮೀಟರ್ ಬಡ್ಡಿದಾರರ, ಖಾಸಗಿ ಫೈನಾನ್ಸ್‌ದಾರರ ಕಿರುಕುಳ. ಇದು ಗೊತ್ತಿದ್ದೂ ಹಣಕಾಸು ಕಂಪನಿಗಳು, ಸಂಸ್ಥೆಗಳನ್ನು ಕೊಬ್ಬಿಸಲಾಗುತ್ತಿದೆ! ಎಲ್ಲಕ್ಕೂ ದುರಂತ ಹಾಗೂ ತಮಾಷೆ ಎಂದರೆ ಬೆಳೆ ವಿಮೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಬೆಳೆವಿಮಾ ಇನ್ಶುಯರೆನ್ಸ್ ಮಾಡಿಸಲು ಅವಕಾಶ ನೀಡಿ ರೈತರ ಕತ್ತು ಹಿಸುಕುವಂತಾಯಿತು. ಸಾಲ ಬೇಕಿದ್ದರೆ ಬೆಳೆ ವಿಮೆ, ಹವಾಮಾನ ವಿಮೆ ಕಡ್ಡಾಯಗೊಳಿಸಲಾಯಿತು. ಈಗ ಬರ, ರಣ ಬಿಸಿಲು ಇದ್ದರೂ ವಿಮೆ ಪರಿಹಾರವೂ ಇಲ್ಲ. ದಮ್ಮಡಿ ಸಾಂತ್ವನವೂ ಇಲ್ಲ. ಕಂತು ತುಂಬಿಸಿಕೊಂಡ ಕಂಪನಿಗಳು ನೂರಾರು ಸಬೂಬು ಹೇಳಿ ಕೈಕುಣಿಸಿವೆ. ಸರ್ಕಾರ ಅವುಗಳ ಮೇಲೆ ಏನಾದರೂ ನಿಯಂತ್ರಣ ಹೇರಿ ವಿಮೆ ಕೊಡಿಸಿತಾ? ಊಹುಂ. ಮತ್ತೆ ಬೆಳೆ ವಿಮೆ ತುಂಬಿ ಎಂದು ಕೃಷಿ ಮಂತ್ರಿ, ಪ್ರಧಾನ ಮಂತ್ರಿಗಳೇ ದೂರದರ್ಶನದಲ್ಲಿ ಕೋರುತ್ತಿದ್ದಾರೆ. ಇದ್ದುದರಲ್ಲೇ ಸಮಾಧಾನ ಎಂದರೆ ಈವರೆಗೆ ರೈತಾಪಿ ಜನರ ಕೂಲಿಗಳ ಕುಟುಂಬ ಅಲ್ಪಸ್ವಲ್ಪ ತೃಪ್ತರಾಗಿರುವುದು
ಗ್ಯಾರಂಟಿ’ ಯೋಜನೆಗಳಿಂದ ಎನ್ನುವುದು ನಿಸ್ಸಂಶಯ. ಭಾಗ್ಯಲಕ್ಷ್ಮೀ ತಿಂಗಳಿಗೆ ೨ ಸಾವಿರ, ಉಚಿತ ಪಡಿತರ, ಆಹಾರ ಧಾನ್ಯ, ಗೃಹೋಪಯೋಗಿ ವಿದ್ಯುತ್ ವಿನಾಯ್ತಿ, ಕಾರ್ಮಿಕರ ಶ್ರಮಿಕ ಕಾರ್ಡ್ ಇವು ಅಷ್ಟರ ಮಟ್ಟಿಗೆ ಬರದ ಛಾಯೆಯನ್ನು ಕಡಿಮೆ ಮಾಡಿವೆ. ನಗರಕ್ಕೆ ಕೂಲಿಗೆ ಬರುವ ಮಹಿಳೆಯರಿಗೆ ಶಕ್ತಿ ಯೋಜನೆ ನೆರವಾಗಿದೆ. ಪ್ರಧಾನ ಮಂತ್ರಿಗಳ ಆರು ಸಾವಿರ ರೂಪಾಯಿ ಯೋಜನೆಯೂ ಸಹ. ಆದರೆ ಉತ್ಪಾದನೆ ಮಾಡುವ ರಟ್ಟೆಗೆ ಕಸುಬಿಲ್ಲ!
ರಾಜ್ಯ ಸರ್ಕಾರ ಮಾಡಿರುವ ಆರೋಪಗಳನ್ನು, ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪ್ರತಿಷ್ಠೆಯಾಗಿ ಪರಿಗಣಿಸಿರುವುದೇ ಈ ಸಮಸ್ಯೆಗೆ ಮೂಲ ಕಾರಣವೇ? ೨೨೩ ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ೨೨.೪೯ ಲಕ್ಷ ರೈತರು ಸಹಕಾರಿ ಸಂಸ್ಥೆಗಳ ಸಾಲದ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡಿ, ಮನರೇಗಾ ಕೂಲಿ ಕೊಡಿ ಎಂದು ರಾಜ್ಯ ಕೇಳಿದೆ. ಒಬ್ಬ ಮುಖ್ಯಮಂತ್ರಿ ಕಳೆದ ಐದು ತಿಂಗಳುಗಳಿಂದ ಪರಿಹಾರ, ಅನುದಾನ ಕೊಡಿ ಎಂದು ಗೋಗರೆದರೂ ಊಹುಂ, ಆ ವಿಷಯದ ಬಗ್ಗೆ ಪ್ರಸ್ತಾಪವಿಲ್ಲ. ದೆಹಲಿಯಲ್ಲೇ ರಾಜ್ಯ ಸರ್ಕಾರ ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಪ್ರತಿಷ್ಠೆ-ಜಿದ್ದಾಜಿದ್ದಿ ರಾಜಕಾರಣವೇ ಮೆರೆಯುತ್ತಿದೆ. ಇದರ ನಡುವೆ ಸಾಯುತ್ತಿರುವವರು ಜನ-ರೈತರು.
ಈಗ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಬಿಸಿಲು, ಬರ, ಕರಾಳ ಛಾಯೆ ಆವರಿಸಿದೆ. ಪ್ರಕೃತಿಯೇ ಉದಾರತೆ ತೋರಬೇಕಿದೆ ವಿನಾ, ಯಾರ ಎದೆಗಾರಿಕೆ, ಯಾರ ನಾಯಕತ್ವವೂ ಜನರ ನೆರವಿಗೆ ಬಾರದು. ಕನಿಷ್ಠ ಬದುಕು ಹಿಡಿದಿಡುವ, ಬದುಕಿನಲ್ಲಿ ವಿಶ್ವಾಸ ಮೂಡಿಸುವ ಕ್ರಮವೇ ಕಾಣುತ್ತಿಲ್ಲವಲ್ಲ !? ಇದು ದುರಂತ.