ಮಂಗಳೂರು: ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಗರದ ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.
ಗುರುವಾರ ರಕ್ಷಾಬಂಧನ ಹಿನ್ನೆಲೆ ಮಕ್ಕಳು ಕೈಗೆ ರಾಖಿ ಕಟ್ಟಿಕೊಂಡು ಬಂದಿದ್ದರು. ಆದರೆ ರಾಖಿ ತೆಗೆಸಿ ಕೆಲ ಶಿಕ್ಷಕರು ಕಸದ ಬುಟ್ಟಿಗೆ ಎಸೆದ ಆರೋಪ ವ್ಯಕ್ತವಾಗಿದ್ದು, ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕ ಮತ್ತು ಶಿಕ್ಷಕರಿಗೆ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದಲೂ ಶಾಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪೋಷಕರು ಮತ್ತು ಶಿಕ್ಷಕರ ವಾಗ್ವಾದದ ಹಿನ್ನೆಲೆ ಸುರತ್ಕಲ್ ಪೊಲೀಸರ ಮಧ್ಯಪ್ರವೇಶ ಮಾಡಿದ್ದಾರೆ. ಫ್ರೆಂಡ್ ಶಿಪ್ ಬ್ಯಾಂಡ್ ಅಂದುಕೊಂಡು ತೆಗೆಸಿದ್ದಾಗಿ ಶಿಕ್ಷಕರು ಸಮಜಾಯಿಷಿ ನೀಡಿದ್ದು, ರಕ್ಷಾ ಬಂಧನ ಯಾವುದೇ ಕಾರಣಕ್ಕೂ ತೆಗೆಸಲ್ಲ ಅಂತ ಶಾಲಾ ಮುಖ್ಯಶಿಕ್ಷಕ ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಕ್ಷೆ ಕಟ್ಟುವಂತೆ ಪೋಷಕರು ಪಟ್ಟು ಹಿಡಿದರು.
ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಆರೋಪ ವಿಚಾರ ಪ್ರತಿಭಟನೆ ಬೆನ್ನಲ್ಲೇ ಪೋಷಕರು ಪಟ್ಟು ಹಿಡಿದು ಶಾಲಾ ಮುಖ್ಯ ಶಿಕ್ಷಕರಿಗೆ ರಾಖಿ ಕಟ್ಟಿದ್ದಾರೆ. ಕ್ರೈಸ್ತ ಶಿಕ್ಷಣ ಸಂಸ್ಥೆಯ ಫಾದರ್ ಕೈಗೆ ರಾಖಿ ಕಟ್ಟಿದ ಪೋಷಕರು, ಮಕ್ಕಳ ಕೈಯಿಂದ ರಕ್ಷೆ ತೆಗೆಸಿದ ಶಿಕ್ಷಕಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬಂದು ಪೋಷಕರ ಕ್ಷಮೆ ಕೇಳಲು ಒತ್ತಡ ಹೆಚ್ಚಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೋಷಕರು ಹೇಳುವಂತೆ, ತಿಂಗಳ ಹಿಂದೆ ಫ್ರೆಂಡ್ ಶಿಪ್ ಡೇ ನಡೆದಿತ್ತು. ಆದರೆ ಅದರ ಬ್ಯಾಂಡ್ ಇವರು ತೆಗೆಸಿಲ್ಲ. ಈ ಮಧ್ಯೆ ಗುರುವಾರ ರಾಖಿ ಕಟ್ಟಿಕೊಂಡು ಬಂದ ಮಕ್ಕಳ ರಾಖಿ ಕಿತ್ತು ಶಿಕ್ಷಕರೊಬ್ಬರು ಬುಟ್ಟಿಗೆ ಎಸೆದಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಕ್ರಿಯೆ ನೀಡಿದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಫಾ.ಸಂತೋಷ್ ಲೋಬೋ ಅವರು, ಕೆಲವರು ತಿಳಿಯದೇ ಬೇಜವಾಬ್ದಾರಿಯಿಂದ ವರ್ತಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರ ಜೊತೆ ಸಭೆ ಮಾಡಿದ್ದೇವೆ. ಈ ವೇಳೆ ತಪ್ಪು ಮಾಡಿದವರು ಪಶ್ಚಾತಾಪ ಪಟ್ಟು ಕ್ಷಮೆ ಕೇಳಿದ್ದಾರೆ. ಈಗ ಸಮಸ್ಯೆ ಪರಿಹಾರವಾಗಿ ಸುಖಾಂತ್ಯ ಕಂಡಿದೆ ಎಂದಿದ್ದಾರೆ.