ಮೈಸೂರು: ಜಿಲ್ಲೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಟಿ.ನರಸೀಪುರ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನೇ ಮನದಲ್ಲಿ ಇಟ್ಟುಕೊಂಡು ಬಾಟಲಿಯಿಂದ ಇರಿದು ಕೊಲೆ ಮಾಡಲಾಗಿದೆ. ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯ್ಕ್ (32) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಈ ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕತೆಯ ಸಾಕ್ಷಿಯಾಗಿದೆ. ಆರೋಪಿಗಳನ್ನು ರಕ್ಷಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬಾರದು, ಹನುಮ ಜಯಂತಿ ಹಾಗೂ ಹಿಂದೂ ಸಂಘಟನೆಗಳ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವೇಣುಗೋಪಾಲರನ್ನು ಕೊಲೆ ಮಾಡಿಸುವ ಸಂಚು ಯಾರದು ಎಂಬ ತನಿಖೆಯಾಗಬೇಕಿದೆ. ಕಾನೂನು ಸುವ್ಯವಸ್ಥೆಗೆ ಎಳ್ಳು ನೀರು ಬಿಟ್ಟಿದ್ದೀರಾ? ಆರೋಪಿಗಳು ಯಾವ ರಾಜಕೀಯ ಪಕ್ಷದ ಹಿನ್ನೆಲೆಯವರು ಹಾಗು ಯಾರ ಚೇಲಾಗಳು ಎಂಬುದನ್ನು ಬಹಿರಂಗಪಡಿಸಿ ಎಂದಿದ್ದಾರೆ.