ಮೊದಲ ಮಹಾಯುದ್ಧದ ನಂತರ ಜಗತ್ತಿನಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ರೂಪುಗೊಳ್ಳುವಂತೆ ಮಾಡಲು ರಚಿಸಲಾಗಿದ್ದ ಲೀಗ್ ಆಫ್ ನೇಷನ್ಸ್ ಸಂಸ್ಥೆ ದ್ವಿತೀಯ ಮಹಾಯುದ್ಧದ ನಂತರ ವಿಸರ್ಜನೆಯಾದ ಮೇಲೆ ಎಲ್ಲ ದೇಶಗಳ ಸಹಮತದೊಂದಿಗೆ ಸೃಷ್ಟಿಯಾದ ವಿಶ್ವಸಂಸ್ಥೆಗೆ ಬದಲಾದ ಜಾಗತಿಕ ರಾಜಕಾರಣದ ಸಂದರ್ಭದಲ್ಲಿ ಸವಾಲುಗಳ ಮೇಲೆ ಸವಾಲು. ಯಾಕೆಂದರೆ ಒಂದಲ್ಲ ಒಂದು ಕಾರಣಕ್ಕೆ ದೇಶಗಳ ನಡುವೆ ಕಾಲು ಕೆರೆದುಕೊಂಡು ಜಗಳಕ್ಕೆ ಬೀಳುವ ಬೆಳವಣಿಗೆ. ಶೀತಲ ಸಮರ ಅಂತ್ಯಗೊಂಡ ನಂತರ, ಅಮೆರಿಕಾ ಹಾಗೂ ರಷ್ಯಾ ದೇಶಗಳ ಗುರುತ್ವಾಕರ್ಷಣೆಯ ಸಾಮರ್ಥ್ಯ ಕರಗಬಹುದು ಎಂಬ ನಿರೀಕ್ಷೆ ಸುಳ್ಳಾಗುವ ರೀತಿಯಲ್ಲಿ ಹಲವು ಬೆಳವಣಿಗೆಗಳು ಜರುಗಿ ಈ ಎರಡು ದೇಶಗಳ ಜೊತೆಗೆ ಬಲಿಷ್ಠ ರಾಷ್ಟ್ರಗಳಾಗಿ ಹೊರ ಹೊಮ್ಮುತ್ತಿರುವ ಹಲವಾರು ದೇಶಗಳು ಈಗ ನಾಯಕತ್ವದ ಪಾತ್ರ ವಹಿಸಲು ಮುಂದಾಗಿರುವ ಪರಿಣಾಮವೆಂದರೆ, ಸದಾಕಾಲ ಸಮರ ಭೀತಿ. ರಷ್ಯಾ ಹಾಗೂ ಉಕ್ರೇನ್ ನಡುವೆ ಎರಡು ವರ್ಷಗಳ ಹಿಂದೆ ಆರಂಭವಾದ ಯುದ್ಧ ಇನ್ನು ಮುಗಿಯದೆ ಹೊಸ, ಹೊಸ ರೂಪಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಘರ್ಷಣೆಯ ವಾತಾವರಣ ಶುರುವಾಗಿ ಬಂಡುಕೋರ ಹಮಾಸ್ ಸಂಘಟನೆಯನ್ನು ನಿಗ್ರಹಗೊಳಿಸುವ ನೆಪದಲ್ಲಿ ಪ್ಯಾಲೆಸ್ಟೈನ್ ದೇಶದ ಮೇಲೆ ಎರಗಿದ ಇಸ್ರೇಲಿಗೆ ಎದುರೇಟು ನೀಡಲು ಇರಾನ್ ದೇಶ ಕಾರ್ಯೋನ್ಮುಖವಾಗಿರುವಂತೆಯೆ ಪರಸ್ವರ ಕಾದಾಟದಲ್ಲಿ ವಿಶ್ವಸಮರದ ಲಕ್ಷಣಗಳು ಗೋಚರಿಸುತ್ತಿರುವುದು ಜಗತ್ತಿಗೆ ಒಂದು ಗಂಡಾಂತರ.
ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಸಂಬಂಧಕ್ಕೆ ದಶಕಗಳ ಇತಿಹಾಸ ಇದೆ. ಜನಾಂಗೀಯ ಘರ್ಷಣೆಯ ತರುವಾಯ ನೆಲೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸೃಷ್ಟಿಯಾದ ಇಸ್ರೇಲ್ ಬಾಹುಬಲಿಯ ರೀತಿಯಲ್ಲಿ ಪರಾಕ್ರಮಿಯಾಗಿರುವುದು ಸುತ್ತಮುತ್ತಲ ದೇಶಗಳಿಗೆ ದೊಡ್ಡ ಸವಾಲು. ಪ್ಯಾಲೆಸ್ಟೆನ್ ಮೇಲೆ ನೇರವಾಗಿ ಇಸ್ರೇಲ್ ಸಮರ ಸಾರಿದೆ, ಆದರೆ ಹಮಾಸ್ ಬಂಡುಕೋರರು ಮೂಲತಃ ಪ್ಯಾಲೇಸ್ಟಿನಿಯರು. ಹೀಗಾಗಿ ಅಳಿಯ ಅಲ್ಲ ಮಗಳ ಮಗಳ ಗಂಡ ಎನ್ನುವಂತೆ ಪ್ಯಾಲೇಸ್ಟಿನಿಯರು ಇಸ್ರೇಲ್ ಕದನ ಹೂಡಿದಂತಾಗಿದೆ.
ಅರಬ್ ರಾಷ್ಟ್ರಗಳ ಮೇಲೆ ಮೊದಲಿನಿಂದಲೂ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಮೊದಲಾದ ಬಲಿಷ್ಠ ರಾಷ್ಟ್ರಗಳ ಕಣ್ಣು ಬೀಳಲು ಕಾರಣ ಅಲ್ಲಿರುವ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸುವ ದುರಾಸೆಯ ಪರಿಣಾಮವಾಗಿ ಅಲ್ಲಿನ ರಾಷ್ಟ್ರಗಳ ಮೇಲೆ ಮೊದಲಿನಿಂದಲೂ ಒಂದು ರೀತಿಯ ಹತೋಟಿಯನ್ನು ಪಾಶ್ಚಾತ್ಯ ರಾಷ್ಟçಗಳು ಹೊಂದಿವೆ. ರಾಜಕಾರಣದ ವರಸೆಗಳು ಬದಲಾದ ಸಂದರ್ಭದಲ್ಲಿ ಖಳನಾಯಕನಂತೆ ಕಂಡು ಬಂದ ಟರ್ಕಿ ದೇಶವನ್ನು ಸದೆಬಡಿಯುವ ಬದಲು ಈಗ ಅರಬ್ ರಾಷ್ಟçಗಳ ನಿಯಂತ್ರಣ ಹೇರುವ ಕಡೆ ಎಲ್ಲರ ಗಮನ ಹರಿದಿದೆ. ಯುದ್ಧ ಯಾವುದೇ ಆಗಿರಲಿ ಧರ್ಮಕಾರಣ ಪ್ರತ್ಯಕ್ಷವಾಗಿಯೇ ಆಗುತ್ತದೆ. ಅರಬ್ ರಾಷ್ಟ್ರಗಳು ಇಸ್ಲಾಂ ಧರ್ಮವನ್ನು ಪರಿಪಾಲಿಸುತ್ತಿರುವ ರಾಷ್ಟ್ರಗಳು. ಇಸ್ರೇಲ್ ಅದಕ್ಕೆ ತದ್ವಿರುದ್ಧ. ಬಲಿಷ್ಠ ರಾಷ್ಟ್ರಗಳದು ಕ್ರೈಸ್ತಧರ್ಮ. ಜಾಗತಿಕ ರಾಜಕಾರಣದಲ್ಲಿ ಹಿಂದೂ ಧರ್ಮದ ಪ್ರಭಾವ ಎಷ್ಟೇ ಇದ್ದರೂ ಗಾತ್ರದಲ್ಲಿ ಚಿಕ್ಕದು. ಹೀಗಾಗಿ ಯುದ್ಧ ಎಂದಕೂಡಲೇ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳ ನಡುವಿನ ಸಂಘರ್ಷ ಎಂಬುದೇ ಅದರ ಅರ್ಥ.
ಭಾರತ ಈ ಯುದ್ಧದ ಬೆಳವಣಿಗೆಯಲ್ಲಿ ತಟಸ್ಥ ಧೋರಣೆಯನ್ನು ತಳೆದಿದ್ದರೂ ಇದು ಯುದ್ಧದ ಸಮಯವಲ್ಲ ಎನ್ನುವ ಘೋಷಣೆಯ ಮೂಲಕ ಎಲ್ಲ ರಾಷ್ಟ್ರಗಳಿಗೆ ತಿಳಿಹೇಳುವ ಜತೆಗೆ ತಟಸ್ಥ ಧೋರಣೆಯನ್ನು ಸ್ಪಷ್ಟಪಡಿಸಿದೆ. ಆದರೆ ರಷ್ಯಾದ ನೀತಿ ಒಂದರ್ಥದಲ್ಲಿ ಇರಾನ್ ಪರವಾಗಿದೆ. ಆದರೆ ಅಮೆರಿಕಾ ಅದಕ್ಕೆ ತದ್ವಿರುದ್ಧ ಈ ವಾತಾವರಣದ ನಡುವೆ ಇರಾನ್ ತನ್ನೆಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಂಡು ಇಸ್ರೇಲ್ ಮೇಲೆ ತಿರುಗಿ ಬಿದ್ದಮೇಲೆ ಮುಂದೇನು ಎಂಬ ಪ್ರಶ್ನೆ ಮೂಡುತ್ತಿದ್ದಂತೆಯೇ ಇಸ್ರೇಲ್ ಸತತವಾಗಿ ಎದುರೇಟು ನೀಡಲು ಮುಂದಾದಾಗ ಸೃಷ್ಟಿಯಾಗಿರುವ ಕದನ ಕುತೂಹಲ ಯಾವಾಗ ಅಂತ್ಯವಾಗುವುದೋ ತಿಳಿಯುತ್ತಿಲ್ಲ.
ವಿಶ್ವಸಂಸ್ಥೆಯ ಪ್ರಧಾನ ಜವಾಬ್ದಾರಿ ಯುದ್ಧದ ವಾತಾವರಣ ಸೃಷ್ಟಿಯಾಗದಂತೆ ನೋಡಿಕೊಂಡು ಶಾಂತಿ ಸ್ಥಾಪನೆ ಮಾಡುವುದು. ಆದರೆ ಅದೊಂದನ್ನು ಬಿಟ್ಟು ವಿಶ್ವಸಂಸ್ಥೆ ಉಳಿದ ಎಲ್ಲ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಮಾಧ್ಯಮಗಳ ಮೂಲಕ ಹೇಳಿಕೆ ಕೊಡುವುದು, ಇಲ್ಲವೆ ನಿರ್ಣಯಗಳ ಮೂಲಕ ಘಟನಾವಳಿಗಳನ್ನು ಖಂಡಿಸುವುದರಿಂದ ಯುದ್ಧ ನಿಲ್ಲುವುದಿಲ್ಲ ಎಂಬುದನ್ನು ವಿಶ್ವಸಂಸ್ಥೆ ಅರಿಯಬೇಕು. ಬಲಿಷ್ಠ ರಾಷ್ಟ್ರಗಳ ತಾಳಕ್ಕೆ ಗೆಜ್ಜೆಕಟ್ಟಿಕೊಂಡು ಕುಣಿಯುವ ಮನೋಧರ್ಮವನ್ನು ಕೈಬಿಟ್ಟು ಸ್ವತಂತ್ರ ನಿಲುವಿನ ಮೂಲಕ ದೇಶಗಳ ನಡುವೆ ಭ್ರಾತೃತ್ವ ಸ್ಥಾಪನೆಯಾಗುವಂತೆ ನೋಡಿಕೊಂಡರೆ ಆಗ ಅದರ ಸ್ವರೂಪವೇ ಬೇರೆ. ಈಗ ಕವಿದಿರುವ ಯುದ್ಧ ನೆರಳು ಮಹಾಮಾರಿ ಕೊರೊನಾ ನೆರಳಿಗಿಂತಲೂ ಭೀಕರ. ಯಾಕೆಂದ್ರೆ ಕೊರೊನಾಗೆ ಲಸಿಕೆ ಈಗ ಉಂಟು. ಆದರೆ ಯುದ್ಧ ನಂಜಿಗೆ ವಿಶ್ವಸಂಸ್ಥೆ ಇನ್ನು ಲಸಿಕೆ ಮಾಡಿಸುವುದರಲ್ಲಿ ಕಾಲಹಾಕುತ್ತಿದೆ. ಕಾಲ ಕೇಳಿ ಬರುವುದಿಲ್ಲ ಎಂಬುದನ್ನು ವಿಶ್ವಸಂಸಂಸ್ಥೆ ನೆನಪಿಸಿಕೊಂಡರೆ ಜಗತ್ತಿಗೆ ಕ್ಷೇಮ.