ಹುಬ್ಬಳ್ಳಿ: ಯುಗಾದಿ ಹಬ್ಬ ಹಾಗೂ ಸರಣಿ ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಒಂದು ದಿನದ ಅಂತರದಲ್ಲಿ ಬಂದಿವೆ. ಹಬ್ಬಗಳ ಹಿಂದಿನ ದಿನ ಹಾಗೂ ನಂತರದ ದಿನಗಳಂದು ಸಾರ್ವಜನಿಕ ರಜೆಗಳು ಬಂದಿವೆ. ಏಪ್ರಿಲ್ 7ರಂದು ರವಿವಾರ, 9ರಂದು ಮಂಗಳವಾರ ಚಾಂದ್ರಮಾನ ಯುಗಾದಿ, 11ರಂದು ಗುರುವಾರ ರಂಜಾನ್, 13 ರಂದು ಎರಡನೇ ಶನಿವಾರ ಹಾಗೂ 14 ರಂದು ರವಿವಾರ ಹೀಗೆ ಎಂಟು ದಿನಗಳ ಅವಧಿಯಲ್ಲಿ 5 ಸಾರ್ವಜನಿಕ ರಜೆಗಳು ಬಂದಿವೆ. ಈ ರಜೆಗಳ ಜೊತೆಗೆ ಒಂದೆರಡು ದಿನ ವೈಯಕ್ತಿಕ ರಜೆ ಹಾಕಿಕೊಂಡರೆ ವಾರಪೂರ್ತಿ ರಜೆ ದೊರಕಿದಂತಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ. ಅವರ ಅನುಕೂಲಕ್ಕಾಗಿ ಏಪ್ರಿಲ್ 6ರಿಂದ 15ರ ವರೆಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಪುಣೆ, ಗೋವಾ ಮತ್ತಿತರ ಪರ ಊರುಗಳಲ್ಲಿ ನೆಲೆಸಿರುವ ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯಮಿಗಳು, ಮತ್ತಿತರ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ಆಗಮಿಸಲಿದ್ದಾರೆ. ಅವರ ಅನುಕೂಲಕ್ಕಾಗಿ ಏಪ್ರಿಲ್ 5ರಂದು ಶುಕ್ರವಾರದಿಂದ 7 ರವಿವಾರದವರೆಗೆ ಬೆಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ರಜೆ ಮುಗಿಸಿ ತಮ್ಮ ಕಾರ್ಯ ಕ್ಷೇತ್ರಗಳಿಗೆ ಹಿಂದಿರುಗುವವರ ಅನುಕೂಲಕ್ಕಾಗಿ ಏಪ್ರಿಲ್ 14ರಂದು ರವಿವಾರ ಹಾಗೂ 15ರಂದು ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ನಡುವೆಯೂ ಸಹ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಬಿಡಲಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಮುಂಗಡ ಬುಕಿಂಗ್; ರಿಯಾಯಿತಿ
ಹಬ್ಬದ ವಿಶೇಷ ಬಸ್ಸುಗಳಿಗೆ https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.