ಯುಕೆಪಿಗೆ ಈ ವರ್ಷ 10 ಸಾವಿರ ಕೋಟಿ ಮಂಜೂರು: ಸಿಎಂ

ಬಾಗಿನ
Advertisement

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಬಂಧಿಸಿದ ಎಲ್ಲ ಕಾಮಗಾರಿಗಳಿಗೆ ಈ ವರ್ಷ 10 ಸಾವಿರ ಕೋಟಿ ರೂ.ಗಳ ಅನುದಾನ ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆಲಮಟ್ಟಿಯಲ್ಲಿ ಶುಕ್ರವಾರ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮಾತನಾಡಿದ ಅವರು ಈಗಾಗಲೇ ಆಲಮಟ್ಟಿ ಎತ್ತರಿಸುವ ನಿಟ್ಟಿನಲ್ಲಿ ಹಣಕಾಸು, ಜಲ ಸಂಪನ್ಮೂಲ ಇಲಾಖೆ ಹಾಗೂ ಆರ್ & ಆರ್ ಜೊತೆ ಎರಡು ಮೂರು ಬಾರಿ ಸಭೆ ನಡೆಸಲಾಗಿದ್ದು, ಈ ವರ್ಷ ಪುನರ್ವಸತಿ, ಪುನರ್ ನಿರ್ಮಾಣ, ಸ್ಥಳಾಂತರ, ಕಾಲುವೆ ನಿರ್ಮಾಣ ಸೇರಿದಂತೆ ಎಲ್ಲ ಕಾರ್ಯಗಳಿಗೆ 10 ಸಾವಿರ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದರು.
ಈ ವರ್ಷ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರಾಜ್ಯದ ಶೇ. 80ರಷ್ಟು ಕೆರೆಗಳು ಭರ್ತಿಯಾಗುವ ಮೂಲಕ ಅಂತರ್ಜಲ ಕೂಡಾ ಹೆಚ್ಚಾಗಿದೆ. ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಗಿದೆ. ಆಲಮಟ್ಟಿ ಜಲಾಶಯವನ್ನು ಈಗಿದ್ದ 519.06 ಮೀಟರ್‌ನಿಂದ 524 ಮೀಟರ್ ಎತ್ತರಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ವಹಿಸಲಾಗಿದೆ ಎಂದರು.