ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎಚ್.ಕೆ. ಪಾಟೀಲ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ ಔಟ್ ಡೇಟೆಡ್ ಹೇಳಿಕೆಗೆ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರು ತಿರುಗೇಟು ನೀಡಿದ್ದು, ಕೇಂದ್ರ ಸಚಿವರ ಕಣ್ಣು ನೆತ್ತಿ ಮೇಲೆ ಬಂದAತೆ ಕಾಣುತ್ತದೆ ಎಂದಿದ್ದಾರೆ.
ಶನಿವಾರ ರಾತ್ರಿ ಪ್ರವಾಸಿ ಮಂದಿರದಲ್ಲಿ ಮಾತನಾಡಿರುವ ಅವರು, ಕೇಂದ್ರ ಸಚಿವರ ಶಬ್ದ ಬಳಕೆಯ ಬಗ್ಗೆ ವಾಗ್ದಾಳಿ ನಡೆಸಿದ ಪಾಟೀಲರು, `ನಿಮ್ಮ ಭಾಷೆಯ ಶೈಲಿ ನೋಡಿದರೇ ನೀವು ಧಾರವಾಡದ ಸಂಸದರು ಎನ್ನುವುದಕ್ಕೆ ಸಹಿತ ಮುಜುಗರ ಉಂಟಾಗುತ್ತಿದೆ’ ಎಂದು ಖಾರವಾಗಿಯೇ ಹೇಳಿದ್ದಾರೆ.
ಜೋಶಿ ಕ್ರೆಡಿಬಿಲಿಟಿ ಡೇಟ್ ಎಕ್ಸಪೈರ್!
ಪ್ರಲ್ಹಾದ ಜೋಶಿ ಅವರ ಕ್ರೆಡಿಬಿಲಿಟಿ(ವಿಶ್ವಾಸಾರ್ಹತೆ) ಡೇಟ್ ಏಕ್ಸಪೈರ್ ಆಗಿದೆ. ರಾಜ್ಯ ಬಿಜೆಪಿ ಸರ್ಕಾರದ ಡೇಟೂ ಎಕ್ಸಪೈರ್ ಆಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಔಟ್ ಡೇಟೇಡ್ ಆಗಲಿದೆ ಎಂದು ಜೋಶಿ ಅವರ ಹೇಳಿಕೆಗೆ ಎಚ್.ಕೆ.ಪಾಟೀಲ್ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ರಾಜ್ಯದ ಜನರು ನಮ್ಮನ್ನು (ಕಾಂಗ್ರೆಸ್) ಇನ್ ಸ್ಟಾಲ್ ಮಾಡ್ತಾರೆ. ನಿಮ್ಮನ್ನು (ಬಿಜೆಪಿ) ಔಟ್ ಡೇಟೇಡ್ ಮಾಡ್ತಾರೆ ಎಂದರು.
೪೦ರಷ್ಟು ಕಮಿಷನ್ ವ್ಯವಹಾರದಲ್ಲಿ ನಿಮ್ಮ ಸರ್ಕಾರದ ಬಣ್ಣ ಬಯಲಾಗಿದೆ. ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿಕೆಯನ್ನು ನೀವು ಗಮನಿಸಿಲ್ಲವೇ? ನೀವು ನನಗೆ ಮತ್ತು ಸಿದ್ದರಾಮಯ್ಯ ಡೇಟ್ ಎಕ್ಸ್ ಪೈರ್ ಅಂತಾ ಹೇಳ್ತೀರಾ ಎಂದು ಹರಿಹಾಯ್ದರು.
ಸಹಿ ಆಗದೇ ಇರುವ ಪತ್ರವನ್ನು ನಿಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಹಾಕಿ, ಹೇಳಿಕೆ ನೀಡಿ ರಾಜ್ಯದ ಜನರಿಗೆ ದಿಕ್ಕು ತಪ್ಪಿಸಿದ್ದೀರಿ. ಅದನ್ನೇ ನಾವು ಮಾಧ್ಯಮದವರಿಗೆ ಕೊಟ್ಟಿದ್ದೇವೆ. ಅವರೂ ನೋಡಿದ್ದಾರೆ. ನೀವು ತಪ್ಪು ಮಾಡಿದ್ದೀರಿ. ಅದನ್ನು ಒಪ್ಪಿಕೊಳ್ಳಿ. ಸುಳ್ಳು ಹೇಳುವುದು ಬಿಟ್ಟು ಕೇಂದ್ರ ಸರ್ಕಾರದ ಕಾಗದದ ಕಡತಗಳಲ್ಲಿ ಅನಧಿಕೃತವಾಗಿ ಕಾಗದ ತೆಗೆದುಕೊಂಡಿದ್ದೆ ಎಂದು ಹೇಳಿ ಎಂದು ಆಗ್ರಹಿಸಿದರು.
ನಾವು ಈಗಾಗಲೇ ಕಳಸಾ ಯೋಜನೆಗೆ ಹಿಂದೆಯೇ ಶಂಕು ಸ್ಥಾಪನೆ ಮಾಡಿದ್ದೇವೆ. ಡಿಪಿಆರ್ ಬದಲಾಯಿಸಿಕೊಂಡು ಈಗ ಮತ್ತೆ ಎರಡು ತಿಂಗಳ ಬಿಟ್ಟು ಶಂಕು ಸ್ಥಾಪನೆ ಮಾಡುತ್ತಾರಂತೆ. ಎಷ್ಟು ಸಾರಿ ಶಂಕು ಸ್ಥಾಪನೆ ಮಾಡ್ತೀರಿ ಎಂದು ಜೋಶಿಯವರಿಗೆ ಪಾಟೀಲರು ಪ್ರಶ್ನಿಸಿದರು.