ಒಳ್ಳೆಯ ಭಾವನೆ ಮತ್ತು ಒಳ್ಳೆಯ ಮನಸ್ಸಿನಿಂದ ಕಾರ್ಯಗಳನ್ನು ಮಾಡುವದರಿಂದ ಒಳ್ಳೆಯ ಫಲಿತವನ್ನೇ ಪಡೆಯಬಹುದಾಗುತ್ತದೆ. ಅದು ಪವಿತ್ರವೂ ಆಗಿರುತ್ತದೆ.
ಅಂತೆಯೇ ಒಬ್ಬ ಸುಭಾಷಿತಕಾರನು
ದೇವೇ ತೀರ್ಥೇ ದ್ವಿಜೇ ಮಂತ್ರೇ ದೈವಜ್ಞೇ ಭೇಷಜೇ ಗುರೌ |
ಯಾದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ ||
ದೇವರಲ್ಲಿ, ತೀರ್ಥದಲ್ಲಿ, ಬ್ರಾಹ್ಮಣರಲ್ಲಿ, ಮಂತ್ರದಲ್ಲಿ, ನಮ್ಮ ಭವಿಷ್ಯವನ್ನು ಹೇಳುವವರಲ್ಲಿ, ಔಷಧದಲ್ಲಿ ಮತ್ತು ಗುರುಗಳಲ್ಲಿ ನಮ್ಮ ಭಾವನೆಯು ಯಾವ ರೀತಿಯಾಗಿರುತ್ತದೆ ಆ ತೆರನಾದ ಫಲವನ್ನು ನಾವು ಪಡೆಯುತ್ತೇವೆ. ಅವರೊಂದಿಗೆ ಸದ್ಭಾವನೆಯಿಂದ ವರ್ತಿಸಿದರೆ ಸತ್ಫಲವನ್ನು ಮತ್ತು ದುರ್ಭಾವದಿಂದ ವರ್ತಿಸಿದರೆ ಕೆಟ್ಟ ಫಲವನ್ನು ಅನುಭವಿಸಬೇಕಾಗುತ್ತದೆ. ಗಂಗಾನದಿಯ ತೀರದಲ್ಲಿ ಹೋಗಿ “ಎಲ್ಲ ನೀರಿನಂತೆ ಇದೂ ಕೂಡ ಒಂದು ನೀರು. ಅದು ಕೂಡ ಕಲುಷಿತವಾದ ನೀರು. ಇದರಲ್ಲಿ ಸ್ನಾನ ಮಾಡುವುದರಿಂದ ನಮ್ಮ ಪಾಪು ಹೇಗೆ ದೂರ ಆಗುತ್ತದೆ” ಎಂದು ವಿಚಾರಿಸುತ್ತಾ ಅದರಲ್ಲಿ ಸ್ನಾನ ಮಾಡಿದರೆ ಅವರ ಪಾಪ ಎಂದೂ ದೂರವಾಗಲು ಸಾಧ್ಯವಿಲ್ಲ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಎದುರು ನಿಂತು “ಇಲ್ಲೇನಿದೆ? ಇದು ಕೂಡ ಒಂದು ಕಲ್ಲು. ಇಲ್ಲಿ ನಮಸ್ಕಾರ ಮಾಡುವುದರಿಂದ ಏನು ಫಲ ಸಿಗುತ್ತದೆ?” ಎಂದು ನಾಸ್ತಿಕ ಭಾವದಿಂದ ವಿಚಾರಿಸಿದರೆ ಇಂಥವರಿಗೆ ಯಾವ ಫಲವೂ ದೊರೆಯಲಾರದು. ಆದ್ದರಿಂದ ಕಣ್ಣಿಗೆ ಕಾಣದ ಪುಣ್ಯವನ್ನು ಪಡೆದುಕೊಳ್ಳಬೇಕಾದರೆ ಮಾಡುವ ಕರ್ಮವನ್ನು ಸದ್ಭಾವದಿಂದ ಆಚರಿಸಬೇಕು.
“ಭಾವೋ ಹಿ ಮಾನಸ ಚೇಷ್ಟಾತ್ಮಾ ಪರಿಪೂರ್ಣಃ ಶಿವಾತ್ಮಕಃ”
ಎಂಬ ಉಕ್ತಿಯಂತೆ ಮನಸ್ಸಿನ ಎಲ್ಲಾ ವ್ಯವಹಾರಗಳು ಪರಿಪೂರ್ಣವಾಗಿ ಶಿವಮಯಗೊಂಡಾಗ ಅದನ್ನು ಭಾವವೆಂದು ಕರೆಯುತ್ತಾರೆ. ಈ ಭಾವವು ಮೇಲ್ನೋಟಕ್ಕೆ ಡಂಭಾಚಾರವಾಗಿ ಮಾತ್ರ ಇರದೆ ಒಳಹೊರಗೊಂದಾಗಿ ಸಹಜವಾಗಿ ಒಡಮೂಡಬೇಕು. ಯಾರದೋ ಆಗ್ರಹಕ್ಕೆ ಅಥವಾ ಒತ್ತಾಯಕ್ಕೆ ಬರದೆ ಹೃದಯಪೂರ್ವಕ ಪರಿಪಕ್ವ ಅಂತಃಕರಣದಲ್ಲಿ ವಿಕಾಸವಾಗಬೇಕು. ಆಗ ಮಾತ್ರ ಅದಕ್ಕೆ ಮಹತ್ವ. ಅಂತೆಯೇ ಅಲ್ಲಮ ಪ್ರಭುದೇವರು
ಒತ್ತಿ ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೋ
ಕಾಮಿಸಿ ಕಲ್ಪಿಸಿ ಭಾವಿಸಿಹೆನೆಂದರೆ ಅದಕ್ಕದೇ ಕೊರತೆ
ಭಾವಿಸುವ ಭಾವನೆಗಿಂತ ಸಾವುದೇ ಲೇಸು ಗುಹೇಶ್ವರ
ಎಂದು ಹೇಳಿದ್ದಾರೆ. ಆದ್ದರಿಂದ ನಮ್ಮ ಹೃದಯದಲ್ಲಿ ಸದ್ಭಾವನೆಗಳು ಎಂದೂ ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು