ದಾವಣಗೆರೆ: ಇಲ್ಲಿ ಗೌರವ ಇಲ್ಲ ಎಂದರೆ, ಯಾಕೆ ಇದೀರಿ, ಹೊರಗಡೆ ಹೋಗಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಹರಿಹಾಯ್ದಿದ್ದಾರೆ. ಹರಜಾತ್ರೆಗೆಂದು ದಾವಣಗೆರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಂಪ್ ಸಚಿವ ಎಂಬ ಯತ್ನಾಳ್ ಹೇಳಿಕೆಗೆ ಮನನೊಂದ ಕಣ್ಣೀರು ಹಾಕಿದರು.
ಯತ್ನಾಳ್ ನಾಲಿಗೆ ಹರಿ ಬಿಟ್ಟಿದ್ದಾರೆ, ಸುಮ್ಮನಿದ್ದಷ್ಟು ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ನಮಗೂ ಮಾತನಾಡುವುದಕ್ಕೆ ಬರುತ್ತದೆ, ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ಗೆ ಹೋಗಿ ಟಿಪ್ಪು ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿಗೆ. ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ಅವರು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ, ನಾವು ಕೃಷ್ಣ, ಘಟಪ್ರಭ ನೀರು ಕುಡಿದೇ ಬೆಳೆದಿದ್ದೇವೆ. ನಮಗೂ ಮಾತನಾಡಲು ಬರುತ್ತದೆ.ದೊಡ್ಡ ಸಮಾಜದಲ್ಲಿ ಹುಟ್ಟಿರುವ ಯತ್ನಾಳ್ ಗೌರವದಿಂದ ಮಾತನಾಡಬೇಕು ಎಂದು ತಾಕೀತು ಮಾಡಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ರಾಜಕಾರಣ ನಡೆಯುತ್ತಿದ್ದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳಿಂದ 100 ಪರ್ಸೆಂಟ್ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು. ಒಂದು ಪೀಠದ ಸ್ವಾಮೀಜಿಯಾದವರಿಗೆ ಯಾರ ಪರ ಯಾರ ವಿರೋಧ ಮಾತನಾಡಬೇಕು ಅನ್ನೋದು ಗೊತ್ತಾಗುವುದಿಲ್ವಾ?ಬೇರೆ ಸಮುದಾಯದ ಸ್ವಾಮೀಜಿಗಳು ಹೇಗೆ ಮೀಸಲಾತಿ ತಗೊಂಡ್ರು ಗೊತ್ತಿಲ್ವಾ..? ಆದರೆ ಈ ಸ್ವಾಮೀಜಿ ಬಾರಕೋಲು ಚಳುವಳಿ ಮಾಡಿ, ಸಿಎಂ ಮನೆಗೆ ಮುತ್ತಿಗೆ ಹಾಕುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಒಂದು ಹೆಜ್ಜೆ ಮುಂದೇ ಹೋಗಿ ಮೀಸಲಾತಿ ನೀಡಿದೆ ಎಂದರು.