ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಂದಿಳಿಯಬೇಕಿದ್ದ ಹೆಲಿಪ್ಯಾಡ್ ಬಳಿ ಪ್ಲಾಸ್ಟಿಕ್ ಹೊದಿಕೆ ಮತ್ತು ಬ್ಯಾರಲ್ ಗಿರಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲಾಗದೆ ಪೈಲಟ್ ಫಜೀತಿ ಅನುಭವಿಸಿದ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಸೋಮವಾರ ಸಂಭವಿಸಿದೆ.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಜೇವರ್ಗಿ ಪಟ್ಟಣದಲ್ಲಿ ಈ ದಿನ ಬೃಹತ್ ರೋಡ್ ಶೋ ನಡೆಸಬೇಕಿದ್ದ ಮಾಜಿ ಸಿಎಂ ಯಡಿಯೂರಪ್ಪ, ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಯಬೇಕಿತ್ತು. ನಿಗದಿತ ಸಮಯಕ್ಕೆ ಹೆಲಿಕಾಪ್ಟರ್ ಬಂದಾಗ್ಯೂ, ಲ್ಯಾಂಡಿAಗ್ ಪ್ರಯತ್ನ ನಡೆಸಿದ್ದ ಪೈಲಟ್ ಹೆಲಿಪ್ಯಾಡ್ ಸಮೀಪದಲ್ಲಿಯೇ ಬೃಹತ್ ಪ್ಲಾಸ್ಟಿಕ್ ಹೊದಿಕೆ ಹಾಗೂ ಪ್ಲಾಸ್ಟಿಕ್ ಬ್ಯಾರಲ್ ಮತ್ತು ಒಂದು ಹೆಲ್ಮೆಟ್ ಗಾಳಿಯಲ್ಲಿ ಗಿರಕಿ ಹೊಡೆಯುತ್ತಿರುವುದನ್ನು ಗಮನಿಸಿದ್ದರಿಂದ ಲ್ಯಾಂಡಿAಗ್ ಕೈಗೊಳ್ಳದ ಪೈಲಟ್ ಆಗಸದಲ್ಲಿಯೇ ಸ್ವಲ್ಪ ಹೊತ್ತು ಹೆಲಿಕಾಪ್ಟರ್ ಸುತ್ತಾಡಿಸಿದ್ದಾರೆ. ಈ ವೇಳೆ, ಹೆಲಿಪ್ಯಾಡ್ ಬಳಿಯಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು ಪ್ಲಾಸ್ಟಿಕ್ ಹೊದಿಕೆ, ಬ್ಯಾರಲ್ ಮತ್ತು ಹೆಲ್ಮೆಟ್ ಸ್ಥಳದಿಂದ ತೆರವುಗೊಳಿಸಿದ ನಂತರ ಪೈಲಟ್ ಯಶಸ್ವಿಯಾಗಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾರೆ.
ಬಳಿಕ ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಿಂದ ಇಳಿದು ಕಾರಿನಲ್ಲಿ ರೋಡ್ ಶೋ ಆರಂಭಗೊಳ್ಳಬೇಕಿದ್ದ ಸ್ಥಳದ ಕಡೆಗೆ ಪ್ರಯಾಣಿಸಿದರು. ಈ ಮಧ್ಯೆ, ಹೆಲಿಪ್ಯಾಡ್ ಸುತ್ತಲೂ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಘಟನೆಯನ್ನು ಕಂಡು ಕೆಲಹೊತ್ತು ಭದ್ರತಾ ಸಿಬ್ಬಂದಿಯ ಮಿಂಚಿನ ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡರು.
ರೈತನ ಹೊಲದಲ್ಲಿದ್ದ ಗುಡಿಸಿಲು ಉಡೀಸ್
ಜೇವರ್ಗಿ ಹೊರವಲಯದ ಸೊನ್ನ ಕ್ರಾಸ್‌ನಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ರೈತರೊಬ್ಬರು ತಮ್ಮ ಹೊಲದಲ್ಲಿ ಗುಡಿಸಿಲು ನಿರ್ಮಿಸಿಕೊಂಡಿದ್ದು, ಅದರ ಮೇಲ್ಚಾವಣಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿದ್ದರು. ಮೇಲಾಗಿ, ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವ ವೇಳೆ ಬೇಕಾಗುವ ಪ್ಲಾಸ್ಟಿಕ್ ಬ್ಯಾರಲ್ ಮತ್ತು ಹೆಲ್ಮೆಟ್, ಖಾಲಿ ಸಿಮೆಂಟ್ ಚೀಲಗಳನ್ನು ಆ ಗುಡಿಸಿಲಿನ ಹೊರಗೆ ಇರಿಸಿದ್ದರು. ಹೆಲಿಪ್ಯಾಡ್‌ನಿಂದ ಕೇವಲ 25 ಅಡಿ ಅಂತರದಲ್ಲಿದ್ದ ಈ ಗುಡಿಸಿಲಿನ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಬರುತ್ತಿದ್ದಂತೆಯೇ ಗುಡಿಸಿಲಿಗೆ ಹೊದಿಸಿದ್ದ ಪ್ಲಾಸ್ಟಿಕ್ ಹೊದಿಕೆ ಹಾಗೂ ಬ್ಯಾರಲ್ ಬಿರುಸಾದ ಗಾಳಿ ಮೇಲೆದ್ದು ಹಾರಾಡಲಾರಂಭಿಸಿವೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Home ನಮ್ಮ ಜಿಲ್ಲೆ ಕಲಬುರಗಿ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ರಮಾದ: ಬ್ಯಾರಲ್, ಪ್ಲಾಸ್ಟಿಕ್ ಗಿರಕಿ: ಪೈಲಟ್ ಜಾಣತನದಿಂದ ತಪ್ಪಿದ ದುರಂತ