ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕರಾಗಿದ್ದ ಕುಂಬ್ಳೆ ಸುಂದರ್ ರಾವ್ (88) ಅವರು ಬುಧವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಪಂಪ್ವೆಲ್ನ ಸ್ವಗೃಹದಲ್ಲಿ ನಿಧನರಾದರು. ಕುಂಬ್ಳೆ ಸುಂದರ್ ರಾವ್ ಅವರು ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧರಾಗಿದ್ದರು.
ಯಕ್ಷಗಾನದಲ್ಲಿ ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದ ಅವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. 50 ಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದರು.
ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 30 ರಂದು ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ್ದ ಅವರು ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿ ಕುಂಬ್ಳೆ ಸುಂದರ್ ರಾವ್ ಸೇವೆ ಸಲ್ಲಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.