ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭೇಟಿಯಲ್ಲಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಮಂಗಳವಾರ ರಾತ್ರಿ ಇಲ್ಲಿನ ಜಾಲಿಯಲ್ಲಿರುವ ಸುನೀಲ್ ನಾಯ್ಕ ಅವರ ರೆಸಾರ್ಟ್‌ನಲ್ಲಿ ಯಕ್ಷಗಾನ ವೇಷವನ್ನು ಧರಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು.
ಕರಾವಳಿಯ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನ ಪಾತ್ರವನ್ನು ಹಾಕುವುದಕ್ಕೂ ಪೂರ್ವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಡಾ. ಕೆ. ಸುಧಾಕರ್ ಅವರಿಗೆ ಯಕ್ಷಗಾನ ವೇಷ ಭೂಷಣದ ಕುರಿತು ತಿಳಿಸಿ ಹೇಳಿದ್ದು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಸಂಜೆ ೪.೩೦ಕ್ಕೆ ಭಟ್ಕಳ ಸರಕಾರಿ ಆಸ್ಪತ್ರೆಗೆ ವೀಕ್ಷಣೆಗೆ ಬರಬೇಕಾಗಿದ್ದ ಸಚಿವರು ರಾತ್ರಿ ೯ ಗಂಟೆಗೆ ಆಗಮಿಸಿದ್ದರು. ನಂತರ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿ ಸಾರ್ವಜನಿಕರ ಸಭೆ ನಡೆಸಿ ಜಾಲಿಯಲ್ಲಿರುವ ಸುನೀಲ್ ನಾಯ್ಕ ಅವರ ರೆಸಾರ್ಟ್‌ಗೆ ತೆರಳಿದ್ದರು. ಅಲ್ಲಿ ಏರ್ಪಡಿಸಲಾಗಿದ್ದ ಭೀಷ್ಮ ವಿಜಯ ಯಕ್ಷಗಾನವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ಡಾ. ಕೆ. ಸುಧಾಕರ್ ಅವರ ಪಕ್ಕದಲ್ಲಿಯೇ ಇದ್ದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ವೇಷ ಭೂಷಣದ ಕುರಿತು ಮಾತನಾಡುತ್ತಾ ಇರುವಾಗ ನೀವು ವೇಷ ಹಾಕಬಹುದು ಎಂದು ಹೇಳಿದಾಗ ಮೊದಲು ನಿರಾಕರಿಸಿದರು. ನಂತರ ಸಚಿವ ಕೋಟ ಅವರ ಒತ್ತಾಯಕ್ಕೆ ಮಣಿದು ವೇದಿಕೆಯಲ್ಲಿಯೇ ವೇಷ ಹಾಕಿದ್ದು ವಿಶೇಷವಾಗಿತ್ತು. ನಂತರ ಅದೇ ವೇದಿಕೆಯಲ್ಲಿ ಯಕ್ಷಗಾನ ಪಾತ್ರಧಾರಿ ಸಚಿವರನ್ನು ಸನ್ಮಾನಿಸಲಾಯಿತು.
ಸ್ವತಃ ಸಚಿವರೇ ಯಕ್ಷಗಾನ ವೇಷ ಧರಿಸಿದ್ದನ್ನು ನೋಡಿ ಯಕ್ಷಗಾನ ಕಲಾವಿದರು ಅತ್ಯಂತ ಸಂತಸ ಪಟ್ಟರಲ್ಲದೇ ಸಚಿವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡರು.