ಮೌಲ್ಯಾಧಾರಿತ ರಾಜಕಾರಣಿ ವೀರೇಂದ್ರ ಪಾಟೀಲ್

Advertisement

ಸುಭಾಷ ಬಣಗಾರ
ಕರ್ನಾಟಕ ಕಂಡ ಪ್ರತಿಭಾವಂತ ಸಂಸದೀಯ ಪಟು, ಮೌಲ್ಯಾಧಾರಿತ ರಾಜಕಾರಣಿ, ಅವಿಸ್ಮರಣೀಯ ಮುತ್ಸದ್ದಿ ವೀರೇಂದ್ರ ಪಾಟೀಲರು. ಅನನ್ಯ ವ್ಯಕ್ತಿತ್ವ, ವಿಶಿಷ್ಟವಾದ ರಾಜಕೀಯ ಮುತ್ಸದ್ಧಿತನ ಹೊಂದಿದವರು. ಗಂಭೀರವಾದ ನಡೆನುಡಿ ಹೊಂದಿದವರು. ಕಲ್ಯಾಣ ಕರ್ನಾಟಕ ಪ್ರದೇಶದ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದ ಮಧ್ಯಮ ವರ್ಗದ ಬಸಪ್ಪ, ಚನ್ನಮ್ಮ ದಂಪತಿಯ ಎರಡನೇ ಪುತ್ರ ವೀರೇಂದ್ರರು. ೧೯೨೪ ಫೆಬ್ರವರಿ ೨೮ರಂದು ಜನಿಸಿದರು. ಅವರ ನೂರನೇ ಜನ್ಮದಿನೋತ್ಸವ ಇಂದು.
ಎರಡು ಸಲ ಮುಖ್ಯಮಂತ್ರಿ (೧೯೬೮-೭೧) ಮತ್ತು (೧೯೮೯-೯೦) ಆಗಿ ಕೆಲಸ ಮಾಡಿದವರು ವೀರೇಂದ್ರ ಪಾಟೀಲರು. ಜನತಾಪಕ್ಷ-ಕಾಂಗ್ರೆಸ್ ಎರಡೂ ಪಕ್ಷಗಳ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ೧೯೭೮ರ ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರುದ್ಧ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಷ್ಟçವ್ಯಾಪಿ ಸುದ್ದಿಯಾಗಿದ್ದರು. ಆದರೆ, ಅಲ್ಪ ಅವಧಿಯಲ್ಲಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾದದ್ದು ಇತಿಹಾಸ. ರಾಜ್ಯದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳಿಸಿದ ಧೀಮಂತ ನಾಯಕ. ಇವರ ನಾಯಕತ್ವದಲ್ಲಿ ೧೯೮೯ರ ಚುನಾವಣೆಯಲ್ಲಿ ಕಾಂಗ್ರೆಸ್ ಇತಿಹಾಸದಲ್ಲೆ ದಾಖಲೆಯೆನ್ನುವಷ್ಟು ೧೭೮ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ನಂತರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದು ಇತಿಹಾಸ.

ಪಾಟೀಲರು ಯೌವನದಲ್ಲಿ ರಾಮಕೃಷ್ಣ ಹೆಗಡೆಯವರೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಯ ಮೇಲೆ ಹಿಡಿತ ಸಾಧಿಸಿದರು. ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಬಾರಿ ಆಯ್ಕೆಯಾದರು. ೧೯೫೭ರಲ್ಲಿ ಎಸ್. ನಿಜಲಿಂಗಪ್ಪ ಸರ್ಕಾರದಲ್ಲಿ ಗೃಹಖಾತೆಗೆ ಉಪಮಂತ್ರಿಯಾದರು. ೧೯೬೮ರಲ್ಲಿ ಮುಖ್ಯಮಂತ್ರಿಯಾದರು. ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಮುಖ್ಯಮಂತ್ರಿಯಾದ ನಂತರ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಜನಕಲ್ಯಾಣ ಕಾರ್ಯದಲ್ಲಿ ತೊಡಗಿದರು. ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶತಮಾನದಷ್ಟು ಹಳೆಯದಾದ ಕಾವೇರಿ ಜಲ ವಿವಾದಕ್ಕೆ ತೆರೆ ಬಿದ್ದದ್ದು ಅವರ ಅಧಿಕಾರಾವಧಿಯಲ್ಲಿ. ಕಾವೇರಿ ನೀರಾವರಿಯನ್ನೇ ಹೆಚ್ಚು ಅವಲಂಬಿಸಿದ್ದ ದಕ್ಷಿಣ ಕರ್ನಾಟಕ ಭಾಗದ ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರ ಜಲ ಆಯೋಗವು ಅವುಗಳನ್ನು ತೆರವುಗೊಳಿಸಲು ನಿರಾಕರಿಸಿದರೂ ಯೋಜನೆಗಳನ್ನು ಮುಂದುವರಿಸಿದ ಧೀಮಂತ ನಾಯಕರೆನಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಿ ದಕ್ಷತೆಯನ್ನು ಮೆರೆದರು. ಹಿಂದುಳಿದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಅನುದಾನ ಬಿಡುಗಡೆ ಮಾಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿದರು. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ೧೯೯೭ರ ಮಾರ್ಚ್ ೧೪ರಂದು ಅವರು ತಮ್ಮ ಬದುಕಿಗೆ ವಿದಾಯ ಹೇಳಿದರು.
ವೀರೇಂದ್ರ ಪಾಟೀಲರ ಅಭಿವೃದ್ಧಿ ದೃಷ್ಟಿ ಕೇವಲ ತಮ್ಮ ತಾಲೂಕು, ಜಿಲ್ಲೆ, ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರದೆ ಸಮಗ್ರ ರಾಜ್ಯದ ಪ್ರಗತಿಯನ್ನು ಹೊಂದಿದ್ದರು. ಬಹುತೇಕವಾಗಿ ಅವರು ರಾಜ್ಯದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. ಇದರಿಂದ ರಾಜ್ಯದೆಲ್ಲೆಡೆ ಹಸಿರು ಕ್ರಾಂತಿಯಾಗಿ ಹೊಲಗದ್ದೆಗಳೆಲ್ಲ ಹಸಿರಿನಿಂದ ನಳನಳಿಸಿದಂತಾದವು. ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯಿತು. ದೂರದೃಷ್ಟಿಯ ವ್ಯಕ್ತಿಯಾಗಿದ್ದವರು ಪಾಟೀಲರು.