ಮೊಬೈಲ್ ಬದಲು ಕೆಟ್ಟು ಹೋದ ತಿಂಡಿ ಪೊಟ್ಟಣ..!

ಮೊಬೈಲ್
Advertisement

ಮಂಗಳೂರು: ಅದೃಷ್ಟ ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 8,800 ರೂ. ಮುಖಬೆಲೆಯ ಮೊಬೈಲ್ ಪೋನ್ ಅನ್ನು 1,785 ರೂ.ಗೆ ಕಳುಹಿಸಲಾಗಿದೆ ಎಂಬ ಸಂದೇಶ ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದವರಿಗೆ ಮೊಬೈಲ್ ಫೋನ್ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ದೇವಳದಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಭವಾನಿ ಶಂಕರ್ ಎಂಬುವರು ಇತ್ತೀಚೆಗೆ ಮನೆಮಂದಿಗೆಂದು ಮೂರು ವಿವೋ ಕಂಪನಿಯ ಮೊಬೈಲ್ ಖರೀದಿಸಿದ್ದರು. ಕೆಲ ದಿನದ ಬಳಿಕ ಕರೆ ಮಾಡಿದ ಸಂಸ್ಥೆ ಅಧಿಕಾರಿಯೊಬ್ಬರು, `ಮೂರು ಮೊಬೈಲ್ ಖರೀದಿಸಿದ್ದಕ್ಕಾಗಿ ನೀವು ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ. ಬೆಲೆಯ ಮೊಬೈಲ್ ಅನ್ನು ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ತಿಳಿಸಿದ್ದರು. ಇದನ್ನು ನಂಬಿದ ಭವಾನಿ ಶಂಕರ್ ಸೋಮವಾರ ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ.
ಬೆಂಗಳೂರಿನ ಆಕಾಂಕ್ಷಾ ಮಾರ್ಕೆಟಿಂಗ್ ಎಂಬ ಸಂಸ್ಥೆ ಹೆಸರಿನಲ್ಲಿ ಪೊಟ್ಟಣ ಕಳುಹಿಸಿರುವ ವಂಚಕರು ತಮ್ಮ ಕೃತ್ಯಕ್ಕಾಗಿ ನಕಲಿ ಸಂಸ್ಥೆಗಳನ್ನು ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.