ಕಾರವಾರ: ಸ್ವೀಚ್ ಬೋರ್ಡ್‌ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್‌ಗೆ ಮಗು ಬಾಯಿ ಹಾಕಿದ ಪರಿಣಾಮ ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ಸಾವನ್ನಪ್ಪಿದ ಘಟನೆ ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಇಂದು ನಡೆದಿದೆ.
ಸಿದ್ದರದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಲುಟಕರ್ ಮೃತಪಟ್ಟಿದೆ. ಇಂದು ಬೆಳಿಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಬಂದ ಮಾಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಮಗು ಆನ್ ಇದ್ದ ಚಾರ್ಜರ್ ವೈಯರ್ ಬಾಯಿಗೆ ಹಾಕಿದ್ದು ಈ ವೇಳೆ ವಿದ್ಯುತ್ ಪ್ರಹರಿಸಿದ ಪರಿಣಾಮ ಮಗು ಸಾವನ್ನಪ್ಪಿದೆ. ತಕ್ಷಣ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ಹೆಸ್ಕಾಂನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಮಗುವಿನ ತಂದೆ ವಿಷಯ ಕೇಳಿ ಅಸ್ವಸ್ತರಾಗಿ ಕುಸಿದು ಬಿದ್ದಿದ್ದು ತಕ್ಷಣ ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಸದ್ಯ ಮೃತ ಮಗುವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಸಂತೋಷ್ ಕಲ್ಗುಟಕರ್ ದಂಪತಿಗೆ ಮೂರನೆ ಮಗುವಾಗಿತ್ತು. ಇನ್ನಿಬ್ಬರು ಹೆಣ್ಣುಮಕ್ಕಳ ಪೈಕಿ ಓರ್ವಳ ಹುಟ್ಟು ಹಬ್ಬ ಕೂಡ ಇಂದೆ ಇರುವುದರಿಂದ ಎಲ್ಲರು ಹುಟ್ಟು ಹಬ್ಬದ ಆಚರಣೆ ಸಂಭ್ರಮದಲ್ಲಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.