ಚಿಕ್ಕಮಗಳೂರು: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ ಜನ್ಮ ನೀಡಿರುವ ಚಿಕ್ಕಮಗಳೂರು ಜಿಲ್ಲೆಗೆ ಇದೇ ಮೊದಲ ಬಾರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಆಗಮಿಸಿದರು.
ಬುಧವಾರ ಬೆಳಿಗ್ಗೆ ಶೃಂಗೇರಿಗೆ ಆಗಮಿಸಿದ ಪ್ರಿಯಾಂಕಗಾಂಧಿಗೆ ಜಿಲ್ಲಾ ಕಾಂಗ್ರೆಸ್ ಸ್ವಾಗತಿಸಿದ ಬಳಿಕ ಶಾರದಾಂಬೆಯ ದರ್ಶನ ಪಡೆದು, ನಂತರದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿದರು, ನಂತರ ಬಾಳೆಹೊನ್ನೂರಿಗೆ ತೆರಳಲಿದ್ದಾರೆ.
ಇಲ್ಲಿನ ರಂಭಾಪುರೀ ಮಠಕ್ಕೆ ಭೇಟಿ ನೀಡಿದ ಬಳಿಕ, ಕಲಾರಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ನಂತರ ಹಿರೆಕೇರೂರಿಗೆ ಹೆಲಿಕ್ಯಾಪ್ಟರ್ನಲ್ಲಿ ತೆರಳಲಿದ್ದಾರೆ.
೨೦೧೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಿಯಗಾಂಧಿ ಅವರು ಚಿಕ್ಕಮಗಳೂರಿಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ನಡೆಸಿದ್ದರು. ೨೦೧೮ರ ಮಾರ್ಚ್ ೨೧ ರಂದು ಕಾಂಗ್ರೆಸ್ ಪಕ್ಷದ ವರಿಷ್ಟರಾದ ರಾಹುಲ್ಗಾಂಧಿ ಅವರು ಶೃಂಗೇರಿ ಹಾಗೂ ಚಿಕ್ಕಮಗಳೂರಿಗೆ ಬಂದಿದ್ದರು. ಆದರೆ, ಈವರೆಗೆ ಪ್ರಿಯಾಂಕಗಾಂಧಿ ಕಾಫಿಯ ನಾಡಿಗೆ ಬಂದಿರಲಿಲ್ಲ.