“ಬ್ರಾಹ್ಮಿ ಮುಹೂರ್ತೆ ದೇವಾನಾಂ ಋಷಿಣಾಮ್ ಚ ಸಮಾಗಮ
ಜಾಗರಸ್ತತ್ರ ಕರ್ತವ್ಯ : ದೇವ ಸನ್ಮಾನ ಸಮ್ಮಿತತ”
ಬ್ರಾಹ್ಮೀ ಮುಹೂರ್ತ ಬಹಳ ಪವಿತ್ರವಾದ ಮಹೂರ್ತ. ಆ ಕಾಲದಲ್ಲಿ ಮನುಜ ಏನು ಸಂಕಲ್ಪ ಮಾಡುತ್ತಾನೋ ಅದು ದೃಢವಾದ ಸಂಕಲ್ಪವಾಗಿರುತ್ತದೆ ಅದನ್ನು ದೇವತೆಗಳು ತಥಾಸ್ತು ಎಂಬುದಾಗಿ ಆಶೀರ್ವಾದವನ್ನು ಮಾಡುತ್ತಾರೆ. ಮನುಷ್ಯ ಒಳ್ಳೆ ವಿಚಾರಗಳನ್ನು ಮಾಡಿದರೆ ಅದನ್ನೇ ದೇವತೆಗಳು ತಥಾಸ್ತು ಅನ್ನುತ್ತಾರೆ. ಬ್ರಾಹ್ಮಿಮುಹೂರ್ತದಲ್ಲಿ ಏಳುವದು ದೇವತೆಗಳಿಗೆ ಸನ್ಮಾನ ಮಾಡಿದಂತೆ. ವಿಪರೀತವಾಗಿ ಏಳದೆ ಕಾಲೂಚಾಚಿ ಮಲಗಿದರೆ ಅದು ದೇವತೆಗಳಿಗೆ ತಿರಸ್ಕಾರ ಮಾಡಿದಂತೆ ದೇವರುಗಳು ನಮಗೆ ಶಾಪ ಕೊಟ್ಟು ಹೋಗುತ್ತಾರೆ.
ಆದ್ದರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಇದು ಮೊಟ್ಟ ಮೊದಲ ಸಂಸ್ಕೃತಿ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಭಗವಂತನ ಧ್ಯಾನವನ್ನು ಮಾಡಿ ತನ್ನ ನಿತ್ಯ ಕಾರ್ಯವನ್ನು ಮಾಡಿ ಮುಂದೆ ತನ್ನ ಲೋಕ ಕಾರ್ಯಕ್ರಮ, ಲೌಕಿಕ ಕಾರ್ಯಕ್ರಮಗಳನ್ನು ಮಾಡುವುದು ರೂಢಿಸಿಕೊಳ್ಳಬೇಕು. ಪವಿತ್ರವಾದ ದೇವತೆಗಳು ಸಂಚಾರ ಮಾಡುವ ಕಾಲದಲ್ಲಿ ಮನಸ್ಸು ಪ್ರಫುಲ್ಲವಾಗಿರುವಾಗ ದೇವರ ಧ್ಯಾನ, ಸಂಕಲ್ಪಗಳನ್ನು ಶುಭ ಕಾರ್ಯಗಳನ್ನು ಮಾಡುವಂತಹ ಶ್ರೇಷ್ಠವಾದ ಸಂಕಲ್ಪ ಮಾಡಬೇಕು ಇದು ಮೊಟ್ಟಮೊದಲ ಸಂಸ್ಕಾರ. ಜೀವನದಲ್ಲಿ ಮಾನವನು ಅಳವಡಿಸಿಕೊಳ್ಳಬೇಕಾದ ಸಂಸ್ಕಾರ. ಅದರಲ್ಲಿಯೂ ವಿಶೇಷವಾಗಿ ಇಂದಿನ ಕಾಲದ ಉದ್ಯೋಗದಲ್ಲಿ ವ್ಯಸ್ತರಾಗಿರುವ ಜನಗಳು ಮಾಡಬೇಕಾದ ನಿತ್ಯಾನೋಷ್ಠಾನಗಳನ್ನು ಮಾಡಲು ಸಮಯ ಇಲ್ಲದಿರುವಾಗ ಅನಿವಾರ್ಯ ಕಾರ್ಯಗಳಿಂದ ಇಡಿ ದಿನ ಜನಗಳು ಬೇರೆ ಕಾರ್ಯಗಳಲ್ಲಿ ವ್ಯಗ್ರರಾಗಿದ್ದಾಗ ಅದರ ಬದಲಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರನ್ನು ಮನಃಸ್ಫೂರ್ತಿಯಾಗಿ. ಧ್ಯಾನಸ್ತೋತ್ರ ಪಠಣೆ ಮಾಡಿ. ಸಂಧ್ಯಾವಂದನ, ದೇವರ ಪೂಜೆ ಮಾಡಬೇಕಾದ ಎಲ್ಲಾ ಕರ್ತವ್ಯಗಳನ್ನು ಮಾಡಿ ಆಧ್ಯಾತ್ಮಿಕವಾದ ಶಕ್ತಿಯನ್ನು ಮೈ ಮತ್ತು ಮನಸ್ಸಿನ ತುಂಬಾ ತುಂಬಿಕೊಂಡು ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ ಯಶಸ್ವಿಯಾಗುತ್ತಾನೆ ಕೆಲವು ತಪ್ಪುಗಳನ್ನು ಮಾಡಿದರೂ, ಆ ಪಾಪಗಳಿಗೆ ಪರಿಹಾರ ಅವನು ಮಾಡಿದಂತಹ ಭಗವಂತನ ಜ್ಞಾನ ಸ್ಮರಣೆಗಳಿಂದಲೇ ಸುಲಭವಾಗಿ ಪರಿಹಾರ ದೊರಕುತ್ತದೆ ಎಂದು ಗುರುಗಳು ಬೋಧಿಸಿದ್ದಾರೆ.