ಕಾರವಾರ: ರಾಜ್ಯಾದ್ಯಂತ ದೊಡ್ಡಮಟ್ಟದ ಸುದ್ದಿ ಮಾಡಿದ್ದ ಹೊನ್ನಾವರದ ಪರೇಶ ಮೇಸ್ತ ಹತ್ಯೆ ಪ್ರಕರಣ ಈಗ ಅಂತಿಮ ಘಟ್ಟ ತಲುಪಿದೆ. ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗ ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಿಬಿಐ ಸುಮಾರು 1500 ಪುಟಗಳ ವರದಿ ಸಲ್ಲಿಸಿದೆ. ಹೊನ್ನಾವರ ನ್ಯಾಯಾಲಯ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ನ. 16ಕ್ಕೆ ವಿಚಾರಣೆ ಮುಂದೂಡಿದೆ.
ಶವವಾಗಿ ಪತ್ತೆ….
ಐದು ವರ್ಷಗಳ ಹಿಂದೆ ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ ಮೇಸ್ತ ಕಾಣೆಯಾಗಿದ್ದ. ಮುಂದೆ ಹೊನ್ನಾವರದ ಶನಿ ದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಅನ್ಯ ಕೋಮಿನವರು ಮೇಸ್ತನನ್ನು ಹತ್ಯೆ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯವರು ಆಕ್ರೋಶ ವ್ಯಕ್ತಮಾಡಿದ್ದರು. ಇದರ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇಡೀ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು.
ಹಿಂಸಾರೂಪದ ಪ್ರತಿಭಟನೆ….
ಹಿಂದೂಪರ ಸಂಘಟನೆಗಳು ಬಂದ್ ಕರೆ ನೀಡಿದ್ದವು. ಕೆಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಕುಮಟಾದಲ್ಲಿ ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಸಂಗವೂ ನಡೆದಿತ್ತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗೆ ಮಣಿದ ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಸುಮಾರು ನಾಲ್ಕೂವರೆ ವರ್ಷ ತನಿಖೆ ನಡೆಸಿದ ಸಿಬಿಐ ಸೋಮವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ನ್ಯಾಯಾಲಯ, ನವೆಂಬರ್ 16ಕ್ಕೆ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ.