ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ೬ ಕ್ಷೇತ್ರಗಳಿಗೆ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿರುವ ಬೆನ್ನಲ್ಲೇ ಕರ್ನಾಟಕ ವಿಧಾನ ಪರಿಷತ್ ೧೧ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಸೇವಾವಧಿ ನಿವೃತ್ತಿಯಿಂದ ತೆರವಾಗಲಿರುವ ಹನ್ನೊಂದು ಸ್ಥಾನಗಳಿಗೆ ಜೂನ್ ೧೩ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಸೋಮವಾರ ವೇಳಾಪಟ್ಟಿ ಪ್ರಕಟಿಸಿದೆ. ತೆರವಾಗಿರುವ ೧೧ ಸ್ಥಾನಗಳಿಗೆ ಜೂ. ೧೩ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ. ಚುನಾವಣೆ ಸಂಬಂಧ ಮೇ ೨೭ಕ್ಕೆ ಅಧಿಸೂಚನೆ ಹೊರಬೀಳಲಿದೆ. ಜೂ.೩ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.೪ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.೬ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಖಾಲಿಯಾಗುತ್ತಿರುವ ಸ್ಥಾನಗಳ ಪೈಕಿ ಆರು ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದರು.