ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪ

Advertisement

ಬೆಂಗಳೂರು: ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಅವರೊಂದಿಗಿನ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತುನಾಡಿದ ಅವರು ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್ ನಡೆದಿದ್ದು, ಇದಕ್ಕೆ ಸಹಕರಿಸಿದ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಅಭಿನಂದನೆಗಳು. ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಮರುಪರಿಶೀಲನಾ ಅರ್ಜಿ ಹಾಕಲಾಗುವುದು.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್‌ಗಳು ಇಂದು ಸಭೆಯಲ್ಲಿ ಭಾಗವಹಿಸಿದ್ದರು. ಅವರ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ, ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ.ಮುಖ್ಯವಾಗಿ ರಾಜ್ಯದ ನೀರಾವರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪರಿಣಿತರ ಸಲಹಾ ಸಮಿತಿಯನ್ನು ರಚಿಸಿ, ಡಾಟಾ ಸಂಗ್ರಹ, ಸಲಹೆ ನೀಡುವ ಕಾರ್ಯವನ್ನು ಮಾಡಬೇಕು. ಅಂತರರಾಜ್ಯ ಜಲವಿವಾದಗಳ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆ, ಕಾನೂನು ತಂಡಕ್ಕೆ ಮಾಹಿತಿ ನೀಡಲು ಕೂಡ ಸಮಿತಿ ಅಗತ್ಯ ಎನ್ನುವ ಸಲಹೆ ಬಂದಿದೆ. ಇದರಂತೆ ಕ್ರಮ ವಹಿಸಲಾಗುವುದು. ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದಾರೆ. ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆಯೂ ಸೂಚಿಸಿದ್ದಾರೆ. ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪ ಮಾಡಬೇಕು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಇಲ್ಲ. ಹಾಗಾಗಿ ತೀವ್ರವಾಗಿ ಇದನ್ನು ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಲಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅದನ್ನು ಬಳಸಲಾಗುವುದು. ಸಂಕಷ್ಟ ಬಂದಾಗ ತಮಿಳುನಾಡಿಗೆ ನೀರು ಬಿಡಬಹುದು ಎಂದು ಸಲಹೆ ನೀಡಿದ್ದಾರೆ ಎಂದರು.