ಮೂರ್ಖರ ದಿನ ಆಚರಣೆ ಹೇಗೆ ಬಂತು..?

Advertisement

ಪ್ರತಿ ವರ್ಷ ಏಪ್ರಿಲ್ ೧ ರಂದು ಮೂರ್ಖರ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಏಪ್ರಿಲ್ ಫೂಲ್ ದಿನದಂದು ಕೆಲವರು ಕೆಲವರನ್ನು ಮೂರ್ಖರನ್ನಾಗಿಸುತ್ತಾರೆ. ಈ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಆಚರಣೆ ಮಾಡಲಾಗುತ್ತದೆ.
ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು ೧೫೮೨ರ ಫ್ರಾನ್ಸ್ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ೧೫೮೧ರ ಹೊಸ ವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ ೧ರಂದು ಕೊನೆಯ ದಿನವಾಗಿತ್ತು. ಚಾರ್ಲ್ಸ್ ದೊರೆಯು ಗ್ರಿಗೋರಿಯನ್ ಕ್ಯಾಲೆಂಡರನ್ನು ಜಾರಿಗೊಳಿಸಿದ ನಂತರ ಹೊಸ ವರ್ಷಾಚರಣೆಯನ್ನು ಜನವರಿ ೧ಕ್ಕೆ ಬದಲಾಯಿಸಲಾಗಿತ್ತು. ಅಂದಿನ ಕಾಲದಲ್ಲಿ ಸಂಪರ್ಕ ಮಾಧ್ಯಮ ಸೀಮಿತವಾಗಿದ್ದ ಪರಿಣಾಮ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್ ಅನ್ನು ಒಪ್ಪಿಕೊಳ್ಳದೆ ಏಪ್ರಿಲ್ ೧ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಈ ಜನತೆಯನ್ನು ಸಾರ್ವಜನಿಕರು ಮೂರ್ಖರೆಂದು ಕರೆಯಲಾರಂಭಿಸಿದರು. ಈ ಸಮುದಾಯಗಳು ಜನರಿಂದ ಅಪಹಾಸ್ಯಕ್ಕೀಡಾದವು. ಈ ಜನರು ಹಾಸ್ಯದ ವಸ್ತುಗಳಾಗಿ ಪರಿಣಮಿಸಿದರು.
ಜನರನ್ನು ಅಪಹಾಸ್ಯಕ್ಕೀಡುಮಾಡುವ ಈ ವ್ಯವಸ್ಥೆಯೇ ಕ್ರಮೇಣ ಒಂದು ಪರಂಪರೆಯಾಗಿ ಬೆಳೆದು ಏಪ್ರಿಲ್ ೧ನ್ನು ಜನರನ್ನು ಮೂರ್ಖರನ್ನಾಗಿ ಮಾಡುವ ದಿನವನ್ನಾಗಿ ಆಚರಿಸಲಾಯಿತು. ಈ ಸಂಪ್ರದಾಯವೇ ೧೮ನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಏಪ್ರಿಲ್ ಫೂಲ್ಸ್ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಏಪ್ರಿಲ್ ೧ರಂದು ಸ್ನೇಹಿತರನ್ನು, ಜನ ಸಾಮಾನ್ಯರನ್ನು ಕುಚೇಷ್ಟೆ ಮಾಡುವುದು ಸರ್ವವ್ಯಾಪಿಯಾಗತೊಡಗಿತು.
ಏಪ್ರಿಲ್ ೧ರಂದು ಯಾರು ಯಾರಿಗೆ ಏನನ್ನೇ ಹೇಳಿದರೂ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಲೆಬೇಕು, ಇಲ್ಲವೇ ಪುನಃ ಪರಿಶೀಲನೆ ನಡೆಸಬೇಕು. ಒಂದು ಕ್ಷಣ ಮೈಮರೆತರೆ ಸಾಕು, ನಿಮ್ಮವರೇ ನಿಮ್ಮನ್ನು ಮೂರ್ಖರನ್ನಾಗಿ ಮಾಡಿ ಬಿಡುತ್ತಾರೆ. ಆದರೆ ಇದಲ್ಲ ಜಸ್ಟ್ ತಮಾಷೆಗಾಗಿ ಮಾತ್ರ. ಏಕೆಂದರೆ ಕಟ್ಟುಕಥೆ, ಸುಳ್ಳು ಹಾಗೂ ಭಯ ಹುಟ್ಟಿಸುವಂತೆ ಕೆಲವು ಮಾತುಗಳೇ ನಿಮ್ಮನ್ನು ಮೂರ್ಖರನ್ನಾಗಿಸಲು ನಿಮ್ಮವರು ಬಳಸುವ ಅಸ್ತçಗಳಾಗಿರುತ್ತವೆ. ಈ ದಿನ ಎಲ್ಲರ ಮೂಲ ಧ್ಯೇಯವೇ ಮೂರ್ಖರನ್ನಾಗಿಸುವುದಾಗಿದೆ.