ಮುಲಾಯಂ ಸಿಂಗ್ ಮರಣೋತ್ತರ ಪದ್ಮಪ್ರಶಸ್ತಿ ಹಿಂಪಡೆಯಲು ಆಗ್ರಹ

ಮುಲಾಯಂ ಸಿಂಗ್
Advertisement

ಉಡುಪಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸುವ ಮೂಲಕ ಅತ್ಯಂತ ಕೆಟ್ಟ ಹಾಗೂ ಹೇಯ ಪರಂಪರೆಯನ್ನು ಕೇಂದ್ರ ಪ್ರಶಸ್ತಿ ಸಮಿತಿ ಹಾಕಿಕೊಂಡಿದೆ. ಮುಲಾಯಂ ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಲಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂಪಡೆದುಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಡಿಯೋ ಸಂದೇಶ ನೀಡಿದ ಅವರು, ಮುಲಾಯಂ ಸಿಂಗ್ 1989-91ರ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಕರಸೇವಕರು ಹಾಗೂ ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ, ರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗೇ ಕಳಂಕ ತಂದಂತೆ ಮಾತ್ರವಲ್ಲ, ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪು ಚುಕ್ಕೆ ಎಂದು ಮುತಾಲಿಕ್ ಬಣ್ಣಿಸಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ ಹೇಳುವುದಾಗಿ ತಿಳಿಸಿದ ಮುತಾಲಿಕ್, ಇಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಯತ್ನಿಸಿದ, ಎನ್ಕೌಂಟರ್ ಮಾಡಲು ಹೊರಟ, ಸಂಸತ್ ಭವನದಲ್ಲಿ ಕಣ್ಣೀರು ಹಾಕಿಸಿದ ವ್ಯಕ್ತಿಗೆ ಪದ್ಮವಿಭೂಷಣ ನೀಡಿರುವುದು ಅಕ್ಷಮ್ಯ ಎಂದು ಪುನರುಚ್ಚರಿಸಿದ್ದಾರೆ.