ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶದಂತೆ ಪೊಕ್ಸೋ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಂಡಿದ್ದು, ಸಾಕ್ಷಿ ವಿಚಾರಣೆಗೆ ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.
ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದರು. ಮೇ 27ರಂದು ನ್ಯಾಯಾಂಗ ಬಂಧನ ಮುಗಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ಇಂದಿಗೆ (ಮೇ 31) ವಿಚಾರಣೆ ಮುಂದೂಡಲಾಗಿತ್ತು.