ಕಲ್ಪವೃಕ್ಷ ಮಾದರಿ ಶಾಲೆ' ಯನ್ನು ಬೈಲಹೊಂಗಲದಲ್ಲಿ ಮಾಡುವುದನ್ನು ನಿರ್ಧರಿಸಿದ ಮೇಲೆ ಅದಕ್ಕೆ ಪ್ರಾಂಶುಪಾಲ ಯಾರಾಗಬೇಕೆಂದು ಯೋಚಿಸಿದೆ. ಒಬ್ಬ ತರುಣ ವ್ಯಕ್ತಿಯನ್ನು ತರುವುದಂತೂ ಖಂಡಿತ ಎಂದುಕೊಂಡಾಗ ಹೊಳೆದದ್ದು ನನ್ನ ಶಿಷ್ಯ ಅರಿಂದಮ್ ಚೌಧುರಿಯ ಹೆಸರು. ಆತ ಮೂಲತ: ಪಶ್ಚಿಮ ಬಂಗಾಲದವರಾದರೂ ಬೆಳೆದದ್ದು, ಕಲಿತದ್ದು ಜೆಮ್‌ಶೇಡ್‌ಪೂರ್‌ದಲ್ಲಿ. ಅವರು ಈ ಸಂಸ್ಥೆಯನ್ನು ಕಟ್ಟಬಹುದೆಂಬ ನಂಬಿಕೆಯಿಂದ ಫೋನ್ ಮಾಡಿ, "ಅರಿಂದಮ್ ನೀವು ಬೈಲಹೊಂಗಲದ ಶಾಲೆಗೆ ಪ್ರಿನ್ಸಿಪಾಲ್ ಆಗಿ ಹೋಗಬೇಕು" ಎಂದೆ. ಆತ
ಗೌರವದಿಂದ, “ಹಾಗೇ ಆಗಲಿ ಸರ್” ಎಂದರು. ಅವರಿಗೆ ಅದುವರೆಗೂ ಬೈಲಹೊಂಗಲವೆಂಬ ಊರು ಇದೆಯೆಂಬುದೂ ಗೊತ್ತಿರಲಿಕ್ಕಿಲ್ಲ. ನನ್ನ ಹತ್ತಿರ ವಿವರಗಳನ್ನು ಕೇಳುವುದಕ್ಕೆ ಅವರಿಗೆ ಹೆದರಿಕೆ. ನಂತರ ನನ್ನ ಸಹೋದ್ಯೋಗಿಗೆ ಫೋನ್ ಮಾಡಿ, “ಸರ್, ನನಗೆ ಬೈಲಹೊಂಗಲಕ್ಕೆ ಹೋಗು ಎಂದರು. ಅದು ಯಾವ ರಾಜ್ಯದಲ್ಲಿದೆ? ಅದು ಯಾವ ತರಹದ ಶಾಲೆ? ನನ್ನ ಹೆಂಡತಿಯನ್ನು ಕರೆದುಕೊಂಡು ಹೋದರೆ ಅಲ್ಲಿ ವಾಸಕ್ಕೆ ಮನೆ ಸಿಕ್ಕೀತೇ?” ಎಂದೆಲ್ಲ ಕೇಳಿಕೊಂಡು, ಬೈಲಹೊಂಗಲಕ್ಕೆ ಬಂದರು. ಶಾಲೆಯ ಮುಖ್ಯಸ್ಥರಾದ ಧಮ್ಮಣಗಿಯವರು ನಗರದ ಪ್ರಮುಖರ ಸಭೆ ಕರೆದು ಶಾಲೆಯ ಬಗ್ಗೆ ತಿಳಿಸಲು ಯೋಚಿಸಿದರು. ಸಭೆಯಲ್ಲಿ ನಾನು ತರುಣ ಪ್ರಾಂಶುಪಾಲರನ್ನು ಪರಿಚಯಿಸಿದಾಗ ಅಲ್ಲಿ ಸೇರಿದ್ದ ಹಿರಿಯರೆಲ್ಲ ಆಶ್ಚರ್ಯ ತೋರಿದರು. ಒಬ್ಬರಂತೂ, “ಈ ಎಳೆ ನಿಂಬೀಕಾಯಿಯನ್ನು ಕರೆದು ತಂದಿದ್ದೀರಿ. ಅನುಭವಿಗಳು ಯಾರೂ ಸಿಗಲಿಲ್ಲವೆ? ಈತನೇ ಹುಡುಗರ ಹಾಗಿದ್ದಾನೆ. ಇವನನ್ನು ನಂಬಿಕೊಂಡರೆ ಶಾಲೆ ಮುಳುಗಿದ ಹಾಗೆಯೇ” ಎಂದು ಭವಿಷ್ಯ ನುಡಿದುಬಿಟ್ಟರು.
ಸಭೆ ಮುಗಿಯುವ ಹೊತ್ತಿಗೆ ಶಾಲೆಯ ಯಜಮಾನರಿಗೂ ಚಿಂತೆ ಪ್ರಾರಂಭವಾಗಿದ್ದರೆ ಆಶ್ಚರ್ಯವಿಲ್ಲ. ತರುಣ ಪ್ರಾಂಶುಪಾಲರು ಕೆಲಸ ಪ್ರಾರಂಭಿಸಿದರು. ಅವರ ಹೆಂಡತಿ ಇಂಗ್ಲೀಷ್ ಶಿಕ್ಷಕಿ. ನಮ್ಮ ಸಂಸ್ಥೆ Academy for Creative Teaching (ACT) ಮೂಲ ಉದ್ದೇಶವೆಂದರೆ ದೂರದ ಹಳ್ಳಿಯಲ್ಲಿರುವ ಶಾಲೆಯಲ್ಲೂ ಬೆಂಗಳೂರಿನ ಉತ್ತಮ ಶಾಲೆಯ ಗುಣಮಟ್ಟ ಕಾಣಬೇಕು. ಗುಣಮಟ್ಟ ಎನ್ನುವುದು ಕೇವಲ ಪಾಠದಲ್ಲಿ ಮಾತ್ರ ಅಲ್ಲ. ಅದು ಕಟ್ಟಡದ ವಿನ್ಯಾಸದಲ್ಲಿ, ಪಾಠೋಪಕರಣಗಳಲ್ಲಿ, ಪೀಠೋಪಕರಣಗಳಲ್ಲಿ, ಶಾಲೆಯ ಕೈದೋಟದಲ್ಲಿ, ಮಕ್ಕಳ ಸಮವಸ್ತ್ರದಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿ, ಪಾಲಕರಿಗೆ ಕಳಿಸುವ ಸಂದೇಶಗಳ ನಿಯಮಿತತೆಯಲ್ಲಿ, ಶಿಕ್ಷಕರ ತರಬೇತಿಯಲ್ಲಿ, ಹೀಗೆ ಎಲ್ಲದರಲ್ಲೂ ಇರಬೇಕು ಎಂಬುದು ಅಪೇಕ್ಷೆ ಮತ್ತು ಸತತ ಪ್ರಯತ್ನ. ಮೊದಮೊದಲು ಹೊಸ ಶಾಲೆಗೆ ಬರಲು ಹಿಂಜರಿದ ಜನರು ನಂತರ ಅಲ್ಲಿಯ ಗುಣಮಟ್ಟವನ್ನು ಕಂಡು ತಂಡತಂಡವಾಗಿ ಬರತೊಡಗಿದರು. ಅಲ್ಲಿ ಪ್ರವೇಶ ದೊರಕುವುದು ಕಷ್ಟವಾಯಿತು. ಈಗ ಆ ಶಾಲೆ ಬೃಹತ್ತಾಗಿ ಬೆಳೆದು ನಿಂತು ಸುಮಾರು ಸಾವಿರದ ಐದನೂರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಆ ಭಾಗದ ಪ್ರಮುಖ ಸಂಸ್ಥೆ ಎಂದು ಪರಿಗಣಿಸಲಾಗುತ್ತಿದೆ. ಆಗ ನಿಯಮಿಸಿದ ತರುಣ ಪ್ರಾಂಶುಪಾಲ ಅರಿಂದಮ್ ಹದಿಮೂರು ವರ್ಷಗಳು ಅಲ್ಲಿಯೇ ಇದ್ದು ಅತ್ಯಂತ ಪ್ರಭಾವಶಾಲೀ ಪ್ರಿನ್ಸಿಪಾಲ್ ಎಂದು ಹೆಸರು ಮಾಡಿದರು. ಇದೆಲ್ಲ ಶ್ರದ್ಧೆಯ, ಪರಿಶ್ರಮದ ಫಲ.
ಇವೆರಡು ಶಾಲೆಗಳ ಬೆಳವಣಿಗೆಯ ನಂತರ ಅನೇಕ ಜನ ನಮ್ಮ ಸಂಸ್ಥೆ ACTನ ಸಹಯೋಗವನ್ನು ಅಪೇಕ್ಷಿಸಿ ಬಂದರು. ಬಂದವರಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಒಳ್ಳೆಯ ಶಿಕ್ಷಣದ ಕನಸನ್ನು ಕಟ್ಟಿಕೊಂಡಿದ್ದ ಸಾಮಾನ್ಯ ಜನರು ಎಲ್ಲರೂ ಬಂದರು. ನನಗೊಂದು ವಿಶೇಷ ಆಸೆ ಇತ್ತು. ಅದು, ಉತ್ತರ ಕರ್ನಾಟಕದಲ್ಲಿ ಸಣ್ಣ ಸಣ್ಣ ಪಟ್ಟಣಗಳಲ್ಲಿ ಒಳ್ಳೆಯ ಶಾಲೆಗಳನ್ನು ಮಾಡುವುದು. ನಾನೂ ಮೂಲದಲ್ಲಿ ಅಲ್ಲಿಯವನೇ. ನನಗೆ ಆ ನೆಲದ ಋಣ ಇದೆ. ಸಮಾಜ ಸುಧಾರಣೆ ರಾಜಕಾರಣಿಗಳಿಂದ ಆಗುತ್ತದೋ ಇಲ್ಲವೋ ಎಂಬುದು ವಿವಾದಾತ್ಮಕ. ನನ್ನ ಖಚಿತ ನಂಬಿಕೆಯೆಂದರೆ ಏನಾದರೂ ಪರಿವರ್ತನೆಯಾಗುವುದಿದ್ದರೆ ಅದು ಸರಿಯಾದ ಶಿಕ್ಷಣದಿಂದ ಮಾತ್ರ. ಸರಿಯಾದ, ಮೌಲ್ಯಯುತವಾದ ಶಿಕ್ಷಣವನ್ನು ಪಡೆದ ಮಕ್ಕಳು ನಾಳಿನ ಸಮಾಜಕ್ಕೆ ಮಾದರಿಯಾಗುತ್ತಾರೆ. ಅವರಿಂದ ನಮ್ಮ ಸಮಾಜ ಜೀವನ ಸುಂದರವಾದೀತು. ನಮ್ಮ ಅಪೇಕ್ಷೆಯಂತೆ ACT ಸಹಕಾರದೊಂದಿಗೆ ಅನೇಕ ಶಾಲೆಗಳು ಬಂದವು. ACT ಸಹಯೋಗದ ಶಾಲೆಗಳಲ್ಲಿ ಶಿಕ್ಷಕರಿಗೆ ಒಳ್ಳೆಯ ಸಂಬಳ ದೊರೆಯುತ್ತದೆ, ಪ್ರತಿ ತಿಂಗಳೂ ಪರಿಣಾಮಕಾರಿಯಾದ ತರಬೇತಿ ಸಿಗುತ್ತದೆ ಎಂದು ಅನೇಕ ಒಳ್ಳೆಯ ಶಿಕ್ಷಕರು ಕೆಲಸಕ್ಕೆ ಬಂದರು. ಒಳ್ಳೆಯ ಶಿಕ್ಷಕರು ಸಹಜವಾಗಿಯೇ ಚೆನ್ನಾಗಿ ಪಾಠ ಮಾಡುತ್ತಾರೆ. ಅದರಿಂದ ಫಲಿತಾಂಶ ಚೆನ್ನಾಗಿರುತ್ತದೆ. ಪಾಲಕರು ಮಕ್ಕಳನ್ನು ಆ ಶಾಲೆಗೆ ಸೇರಿಸಲು ಮುಂದೆ ಬರುತ್ತಾರೆ. ಹೀಗೆಲ್ಲ ಆಗಿ ನಮ್ಮ ಎಲ್ಲ ಶಾಲೆಗಳೂ ಪ್ರಸಿದ್ಧವಾದವು. ಹೀಗೆ ಹೇಳುವಾಗ ವೈಫಲ್ಯಗಳೇ ಇರಲಿಲ್ಲ ಎನ್ನುವುದು ಸುಳ್ಳಾಗುತ್ತದೆ. ಕೆಲವು ಶಾಲೆಗಳಲ್ಲಿ ನಾವು ಯಶಸ್ವಿಯಾಗಲಿಲ್ಲ. ಅದಕ್ಕೆ ಕೆಲವೊಂದು ಕಡೆಗೆ ಆಡಳಿತವರ್ಗದ ಅಸಹಕಾರ, ಹಣಕಾಸಿನ ಕೊರತೆ, ಅತಿಯಾದ ಅಪೇಕ್ಷೆಗಳು, ನಮ್ಮ ಸಂಸ್ಥೆಯ ಕೆಲವು ಸದಸ್ಯರಿಂದ ಅಸಮರ್ಪಕ ಕಾರ್ಯ ಇವೆಲ್ಲ ಕಾರಣವಾಗಿರಬೇಕು. ಆದರೆ ಪ್ರತಿಯೊಂದು ವೈಫಲ್ಯ ನಮ್ಮನ್ನು ಹೆಚ್ಚು ಪರಿಣಿತರನ್ನಾಗಿ ಮಾಡಿತು.
ನಮ್ಮ ಸಂಸ್ಥೆಯದೊಂದು ವಿಚಿತ್ರ ಪರಿಸ್ಥಿತಿ. ಅದು ಕೇವಲ ನಮಗೆ ಮಾತ್ರವಲ್ಲ, ಪ್ರಪಂಚದಲ್ಲಿ ನಮ್ಮಂತಹ ಯಾವುದೇ ಸಂಸ್ಥೆಗೆ ಎದುರಾಗುವ ಸ್ಥಿತಿ. ನಮ್ಮನ್ನು Consultant ಅಥವಾ ಸಲಹೆಗಾರರು ಎಂದು ಭಾವಿಸುತ್ತಾರೆ. ಆ ಶಾಲೆ ನಮ್ಮದೇ ಎಂಬಂತೆ ಶ್ರದ್ಧೆಯಿಂದ, ಪರಿಶ್ರಮದಿಂದ ದುಡಿಯುತ್ತೇವೆ. ಶಾಲೆ ಚೆನ್ನಾಗಿ ಅಭಿವೃದ್ಧಿಯಾದರೆ ಸಂಸ್ಥೆಯ ಆಡಳಿತವರ್ಗ, ನಮ್ಮ ಶಾಲೆಯನ್ನು ಹೇಗೆ ಬೆಳೆಸಿದ್ದೇವೆ ನೋಡಿ ಎಂದು ಹೆಮ್ಮೆ ಪಡುತ್ತಾರೆ. ಯಶಸ್ಸು ಅವರಿಗೇ ಸೇರಿದ್ದು. ಒಂದು ವೇಳೆ ಶಾಲೆ ಚೆನ್ನಾಗಿ ನಡೆಯದಿದ್ದರೆ, “ಏನು ಮಾಡೋದು? ಅವರೆಲ್ಲ ಪರಿಣಿತರೆಂದು ಶಾಲೆಯನ್ನು ಅವರಿಗೆ ಒಪ್ಪಿಸಿದೆವು. ಅವರ ಮಾರ್ಗದರ್ಶನ ಚೆನ್ನಾಗಿರಲಿಲ್ಲ” ಎಂದು ಸಲಹೆಗಾರರಾದ ನಮ್ಮನ್ನು ದೂಷಿಸುತ್ತಾರೆ. ಯಶಸ್ಸು ಬಂದರೆ ಅವರದು, ವೈಫಲ್ಯ ಪೂರ್ತಿ ನಮ್ಮ ತಲೆಗೇ ಕಟ್ಟಿದ್ದು.
ಭಗವಂತನ ಕೃಪೆಯಿಂದ ಇದುವರೆಗೂ ACT ಸಹಯೋಗದೊಂದಿಗೆ ಶಾಲೆಗಳು ನಡೆಯುತ್ತಿವೆ. ಅವು ಪ್ರಪಂಚದಾದ್ಯಂತ ಹರಡಿವೆ. ನಮಗೆ ತುಂಬ ಸಂತೋಷ ನೀಡುವ ವಿಷಯವೆಂದರೆ ನಮ್ಮ ತರಬೇತಿಯನ್ನು ಪಡೆದ ಕನಿಷ್ಠ ಐದಾರು ಸಾವಿರ ಜನ ಶಿಕ್ಷಕರು ಈ ಶಾಲೆಗಳಲ್ಲಿ ಪಾಠ ಮಾಡುತ್ತಾರೆ. ಒಂದು ರೀತಿಯಲ್ಲಿ ನಾವು ನಿತ್ಯವೂ ಸುಮಾರು ಒಂದು ಲಕ್ಷ ಮಕ್ಕಳನ್ನು ಈ ಶಾಲೆಗಳಲ್ಲಿ ತಲುಪುತ್ತಿದ್ದೇವೆ. ಇದುವರೆಗೂ ಸುಮಾರು ಮೂರು ಲಕ್ಷ ಜನ ಶಿಕ್ಷಕರಿಗೆ ತರಬೇತಿ ACT ನಿಂದ ನಡೆದಿದೆ.
ಇದೆಲ್ಲ ನನಗೆ ತುಂಬ ತೃಪ್ತಿ ತಂದಿದೆ. ಜೇಬಿನಲ್ಲಿ ಒಂದು ರೂಪಾಯಿ ಕೂಡ ಇಲ್ಲದೆ, ಕೇವಲ ನಂಬಿಕೆಯ ಮೇಲೆ, ಜಗತ್ತಿನಲ್ಲಿರುವ ಒಳ್ಳ್ಳೆಯತನದ ಮೇಲೆ ಭರವಸೆಯನ್ನಿಟ್ಟು ಪ್ರಾರಂಭಿಸಿದ ಸಂಸ್ಥೆ ಇಂದು ದೊಡ್ಡದಾಗಿ ಬೆಳೆದು ಲಕ್ಷಾಂತರ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿ ನಿಂತದ್ದು ಒಂದು ಪವಾಡ. ಈ ಪವಾಡದ ಹಿಂದೆ ಭಗವಂತನ ಕರುಣೆ, ಸಹೋದ್ಯೋಗಿಗಳ ಅವಿರತ ಪ್ರಯತ್ನ, ಸಮಾಜದ ಸಹಕಾರ ಎಲ್ಲ ಸೇರಿವೆ.
ಇನ್ನು ಮುಂದೇನು? ನನಗೆ ಗೊತ್ತಿಲ್ಲ. ಭವಿಷ್ಯವನ್ನು ಮುಂದಾಗಿ ತಿಳಿಯುವ ಆಸಕ್ತಿಯೂ ನನಗಿಲ್ಲ. ಭವಿಷ್ಯವನ್ನು ತಿಳಿಯಲೂ ಬಾರದು. ಬದುಕಿನ ಅನಿಶ್ಚಿತತೆಯೇ ಅದರ ಸೌಂದರ್ಯದ ಮೂಲ. ಅಂತ್ಯ ಗೊತ್ತಿದ್ದೂ ಬದುಕುವುದು ಬಹಳ ಬೇಜಾರಿನ ಕೆಲಸ. ಒಂದು ಪತ್ತೇದಾರಿ ಕಾದಂಬರಿಯ ಅಂತ್ಯ ಗೊತ್ತಿದ್ದರೆ ಓದಲು ಆಸಕ್ತಿ ಬಂದೀತೇ? ಏನು ಬರುತ್ತದೋ ಬರಲಿ. ಅದನ್ನು ಭರಿಸುವ, ಸಂತೋಷಿಸುವ ಶಕ್ತಿಯನ್ನು ಭಗವಂತನಲ್ಲಿ ಬೇಡುವುದೊಂದೇ ನಮ್ಮ ಕೆಲಸ. ಇದುವರೆಗೂ ಭಗವಂತ ಚೆನ್ನಾಗಿ ಇಟ್ಟಿದ್ದಾನೆ. ಬದುಕಿನಲ್ಲಿ ಸಂಪೂರ್ಣ ತೃಪ್ತಿಯನ್ನು ಕೊಟ್ಟಿದ್ದಾನೆ. ನಾನು ಅಪೇಕ್ಷಿಸಿದ ಕೆಲಸವನ್ನೇ ಮಾಡುವ ಅವಕಾಶ ಸೃಷ್ಟಿಸಿದ್ದಾನೆ. ಬದುಕಿಗೊಂದು ಧನ್ಯತೆಯನ್ನು ನೀಡಿದ್ದಾನೆ. ನನ್ನ ಸಹಸ್ರಾರು ವಿದ್ಯಾರ್ಥಿಗಳ ಪ್ರೀತಿ, ನನ್ನ ಕನ್ನಡ ಜನತೆಯ ಪ್ರೀತಿ, ಆತ್ಮೀಯತೆಯ ಮಹಾಪೂರದಲ್ಲಿ ಕೊಚ್ಚಿ ಹೋಗಿದ್ದೇನೆ. ಪರದೇಶಗಳಲ್ಲಂತೂ ಕನ್ನಡದ ಜನ ತೋರಿದ ಅನನ್ಯ ಪ್ರೀತಿ ನನ್ನನ್ನು ಮೂಕನನ್ನಾಗಿಸಿದೆ.
ಮುಂದಿನ ಬದುಕು ಹೇಗಾದೀತು ಎಂಬ ಚಿಂತೆ ಇಲ್ಲ. ನನಗೆ ಅತ್ಯಂತ ಸುಸಂಸ್ಕೃತವಾದ ಮನೆತನದ ಆಸ್ತಿಭಾರ, ಸದಾಕಾಲ ಜೊತೆಗಿದ್ದು ನನ್ನನ್ನು ಕಾಪಾಡುವ ಧರ್ಮಪತ್ನಿ, ಪ್ರೀತಿಯ ಮೂರ್ತಿಗಳೇ ಆದ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಬದುಕನ್ನು ಹಗುರವಾಗಿಸಿವೆ. ಈ ದೀರ್ಘ ಬದುಕಿನಲ್ಲಿ ನಾನು ಸಾಕ್ಷಿಯಾಗಿ ನನ್ನ ಸುತ್ತ ಮುತ್ತ ಬದಲಾದ ಪ್ರಪಂಚವನ್ನು ಕಂಡಿದ್ದೇನೆ. ಅನೇಕ ಬದಲಾವಣೆಗಳಿಗೆ ನಾನೂ ಪಕ್ಕಾಗಿದ್ದೇನೆ. ಮತ್ತೆ ಕೆಲವು ಬದಲಾವಣೆಗಳಿಗೆ ನಾನು ಕಾರಣವಾಗಿದ್ದೇನೆ. ನನ್ನ ಸಾಕ್ಷಿ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿ ವಿರಮಿಸುತ್ತೇನೆ.
ಮುಂದಿನ ಬದುಕಿಗೆ ಭಗವಂತನೇ ಸಾಕ್ಷಿ