ಹುಬ್ಬಳ್ಳಿ : ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ನಮ್ಮ ಪಕ್ಷದ ಸಂಸದೀಯ ಮಂಡಳಿ, ಶಾಸಕರು ನಿರ್ಧರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಣೆ ಮಾಡಿದರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಡ್ಡಾ ಅವರು ಈಚೆಗೆ ನನ್ನ ಕ್ಷೇತ್ರದಲ್ಲಿ ಪ್ರಚಾರದ ವೇಳೆಯೂ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಅದೇ ರೀತಿ ಪ್ರೀತಿ ವಿಶ್ವಾಸದಿಂದ ಮುಂದಿನ ಸಿಎಂ ಬೊಮ್ಮಾಯಿ ಎಂದು ಹೇಳಿದ್ದಾರೆ. ಈ ಹಿಂದೆ ಅಮಿತ್ ಶಾ ಅವರೂ ನನ್ನ ಮೇಲೆ ಭರವಸೆ ಇಟ್ಟು ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ನಡೆಸುತ್ತೇವೆ ಎಂದು ಘೋಷಿಸಿದ್ದರು. ರಾಷ್ಟ್ರೀಯ ನಾಯಕರು ನನ್ನ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾದಿಂದ ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ. ಮತ್ತೆ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ನಿರೀಕ್ಷೆಯಿಂದಲ್ಲ. ಅದನ್ನು ಕ್ಲೇಮ್ ಮಾಡಲ್ಲ. ಪಕ್ಷ ಮತ್ತೆ ಅಧಿಕಾರಕ್ಕೆ ತರುವುದಷ್ಟೇ ಗುರಿ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಜನರು, ರೈತರು ಕಷ್ಟದಲ್ಲಿದ್ದಾಗ ಕಾಂಗ್ರೆಸ್ ಯಾವತ್ತೂ ಸ್ಪಂದಿಸಿಲ್ಲ. ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಿದ್ದ ಮನೆಗೆ ಕಾಂಗ್ರೆಸ್ 2000 ಕೊಟ್ಟಿತ್ತು. ಬೆಳೆ ಹಾನಿಗೆ ಹೆಕ್ಟೇರ್ ಗೆ 3000 ಕೊಟ್ಡಿತ್ತು. ನಮ್ಮ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿದ್ದ ಮನೆಗೆ 95 ಸಾವಿರ ಕೊಡಲಾಗಿದೆ. ಒಣಬೇಸಾಯದ ಬೆಳೆ ಹಾನಿಗೆ ಹೆಕ್ಟೇರ್ ಗೆ 6000, ನೀರಾವರಿ ಬೆಳೆ ಹಾಳಾಗಿದ್ದರೆ 15000 ದಿಂದ 25000, ತೋಟಪಟ್ಡಿಗೆ 18000 ಕೊಡಲಾಗಿದೆ ಎಂದು ಹೇಳಿದರು.
ಅತೀ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಯಾವ ರೀತಿಯಲ್ಲೂ ರೈತರ ನೆರವಿಗೆ ಧಾವಿಸಲಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ಮಾತ್ರ ಬಡವರು, ರೈತರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿದೆ. ಹೀಗಾಗಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ ಚುನಾವಣೆ ಪ್ರಚಾರಕ್ಜಷ್ಟೇ ಬರ್ತಾರೆ, ಪ್ರವಾಹ ಬಂದಾಗ ಬಂದಿರಲಿಲ್ಲ ಎಂಬ ಹೇಳಿಕೆ ಗೆ ಅರ್ಥವಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿಯವರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಅವರಿಗೆ ಮಾಹಿತಿ ಕೊರತೆ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ 50 ನಾಯಕರ ಮೇಲೆ ಲೋಕಾಯುಕ್ತ ದಾಳಿಗೆ ಬಿಜೆಪಿ ತಂತ್ರ ರೂಪಿಸಿದೆಯಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಕಳ್ಳನ ಮನಸ್ಸು ಹುಳ್ಳುಳ್ಳಗೆ’ ಎಂದು ಮಾರ್ಮಿಕವಾಗಿ ನುಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರು, ಮುತ್ಸದ್ಧಿಗಳು. ಅಂಥವರು ಹೇಳಿಕೆ ನೀಡುವಾಗ ಎಚ್ಚರವಹಿಸಬೇಕು. ಎಚ್ಚರ ತಪ್ಪಿದರೆ ಅವರು ನೀಡಿದ ಹೇಳಿಕೆಗೆ ಅದೇ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತವೆ. ಈಗ ಆಗಿರುವುದೂ ಅದೇ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಸೇರಿದಂತೆ ಬಿಜೆಪಿ ನಾಯಕರು ಖರ್ಗೆ ಅವರ ಬಗ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡರು.