ಮೀಸಲಾತಿ ನೀಡಿದರೆ ಕಲ್ಲುಸಕ್ಕರೆ, ಇಲ್ಲದಿದ್ದರೆ ಬಂಡಾಯ-ಬಸವಜಯ ಮೃತ್ಯುಂಜಯ ಸ್ವಾಮೀಜಿ

Advertisement

ಬೆಳಗಾವಿ: ಮೀಸಲಾತಿ ಪಡೆದೇ ಮನೆಗೆ ಹೋಗುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುವರ್ಣ ಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಡಿ. 22ರಂದು ಬೃಹತ್‌ ಸಮಾವೇಶ ನಡೆಯುವುದು ಶತಸಿದ್ಧ. ಬುತ್ತಿ ಕಟ್ಟಿಕೊಂಡು ಬರುವ ನಮ್ಮ ಜನ ಸುವರ್ಣ ವಿಧಾನಸೌಧ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಸಿದರು.
ಸಮಾವೇಶ ವಿಫಲಗೊಳಿಸುವ ಉದ್ದೇಶದಿಂದ ಆಯಾ ಜಿಲ್ಲೆಗಳ ಗಡಿಯಲ್ಲೇ ಜನರನ್ನು ತಡೆಯಲು ಬ್ಯಾರಿಕೇಡ್‌ ಹಾಕಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ನಾವು ಶಾಂತ ರೀತಿಯ ಹೋರಾಟ ಮಾಡುವವರು. ಯಾರನ್ನೂ ತಡೆಯ ಕೂಡದು ಎಂದರು.
ಗುರುವಾರ ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗುತ್ತದೆ. ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿ ಅವರನ್ನು ಕರೆದು ಕಲ್ಲುಸಕ್ಕರೆ ತುಲಾಭಾರ ಮಾಡಿ, ಸಿಹಿ ತಿನ್ನಿಸುತ್ತೇವೆ. ಇಲ್ಲದಿದ್ದರೆ ಬಂಡಾಯದ ಧ್ವಜ ಎತ್ತುತ್ತೇವೆ ಎಂದರು.
‘ಮುಖ್ಯಮಂತ್ರಿ ಅವರನ್ನು ಬಹಳ ನಂಬಿದ್ದೇವೆ. ಗುರುವಾರ ವರದಿ ತರಿಸಿಕೊಳ್ಳಲಿದ್ದಾರೆ ಎಂಬ ಸೂಚನೆಗಳು ಬಂದಿವೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.