ಶಿರಸಿ: ಮೀಸಲಾತಿ ಉದ್ದೇಶ ಏನು? ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಿಷ್ಠ ಸಮುದಾಯಗಳ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆ. ಹೀಗಾದರೆ ಹೇಗೆ?. ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿಯುತ್ತಿದ್ದರೆ ಸಣ್ಣ ಸಮುದಾಯಗಳು ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತವಾಗುವ ಸಾಧ್ಯತೆ ಇದೆ. ಸರ್ಕಾರಕ್ಕೂ ಮೀಸಲಾತಿ ಹಂಚಿಕೆಗೆ ಸ್ಪಷ್ಟ ಮಾನದಂಡ ಇದ್ದಂತಿಲ್ಲ. ಹೀಗಾಗಿ ರಾಜಕೀಯ ಪ್ರಭಾವ ಬೀರುವ ಮತ್ತು ಜಾತಿಗಳ ನಡುವೆ ಸಂಘರ್ಷ ಹುಟ್ಟಿಸುವ ಮೀಸಲಾತಿಯನ್ನೇ ರದ್ದುಪಡಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
‘ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಶೇ. 100ರಷ್ಟು ಮೀಸಲಾತಿಯನ್ನೇ ನಿಗದಿಪಡಿಸಬೇಕು. ಜಾತಿ, ಧರ್ಮದ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅವಕಾಶ ಒದಗಿಸಲಿ. ಈ ಸಂಬಂಧ ಸಂವಿಧಾನ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿ’ ಎಂದರು.