ಶಿಗ್ಗಾವಿ: ಮೀಸಲಾತಿ ಹೋರಾಟದಲ್ಲಿ ಇಂದು ಬಂಜಾರ ಗುರು ಪೀಠದ ಶ್ರೀಗಳು ಮೀಸಲಾತಿಯಿಂದ ನೊಂದು ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ ಪಟ್ಟಣದ ಆಡಳಿತ ಭವನದ ಅಂಬೇಡ್ಕರ್ ಮೂರ್ತಿ ಮುಂದೆ ಜರಗಿತು.
ಇತ್ತೀಚೆಗೆ ಬಿಜೆಪಿ ಸರ್ಕಾರ ನೀಡಿದ ಮೀಸಲಾತಿಯನ್ನು ವಿರೋಧಿಸಿ ಇಂದು ಶಿಗ್ಗಾವಿ ಪಟ್ಟಣದಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಡಳಿತ ಭವನದ ಎದುರಿಗಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮತ್ತು ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅದರಂತೆ ಪಟ್ಟಣದ ಮಧ್ಯ ಭಾಗದಲ್ಲಿರುವ ಆಡಳಿತ ಭವನದ ಎದುರು ಬಂಜಾರ ಸಮುದಾಯದ ಮತ್ತು ಇತರ ಸಮುದಾಯಗಳ ಮುಖಂಡರೊಂದಿಗೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲು ಆಗಮಿಸಿದ ಗುಂಡೂರು ಹುಬ್ಬಳ್ಳಿಯ ಬಂಜಾರ ಗುರು ತಿಪ್ಪೇಶ್ ಮಹಾಸ್ವಾಮಿಗಳು ಮಾಲಾರ್ಪಣೆ ಮಾಡಿ ನಂತರ ಪಕ್ಕದಲ್ಲಿಯ ಕಬ್ಬಿಣದ ಕಂಬಿಗೆ ತಮ್ಮ ಕೊರಳಿನಲ್ಲಿರುವ ಶಾಲಿನಿಂದ ನೇಣು ಬಿಗಿದುಕೊಂಡು ನಂತರ ಮೇಲಿನಿಂದ ಜಿಗಿದರು ತಕ್ಷಣವೇ ಗಮನಿಸಿದ ಬಂಜಾರ ಸಮಾಜದ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಸ್ವಾಮೀಜಿಯವರನ್ನ ರಕ್ಷಿಸಿ ಆಸ್ಪತ್ರೆಗೆ ರವಾನಿಸಿದರು.