ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಲಿಲ್ಲ ಏಕೆ?

Advertisement

ಕೊಡಗು(ವಿರಾಜಪೇಟೆ): ಬಿಜೆಪಿ ಭಾರತದಲ್ಲಿ, ಯಾವುದಾದರೂ ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಸಿ ರೈತರಿಗೆ, ಕೃಷಿಗೆ ನೆರವಾದ ಒಂದೇ ಒಂದು ಉದಾಹರಣೆ ಇದ್ದರೆ ನಾನು ಬಿಜೆಪಿ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಸವಾಲು ಹಾಕಿದರು.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ. ಕಟ್ಟಿಸಿದ ಉದಾಹರಣೆ ಇದ್ದರೆ ಹೇಳಿ ಎಂದು ಸವಾಲು ಹಾಕಿದರು.
1925ರಲ್ಲೇ RSS ಹುಟ್ಟಿದರೂ ಅಪ್ಪಿ ತಪ್ಪಿಯೂ ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.‌ ಭಾರತೀಯರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಹೋರಟ ಮಾಡಿ ಪ್ರಾಣ ತ್ಯಾಗ ಮಾಡಿದ, ಜೈಲು ಸೇರಿದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈಗ ಭಾರತದ ಜೀವಾಳವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಹೋರಾಟ ಆರಂಭಿಸಿದೆ ಎಂದರು.
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿಯ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳುತ್ತಾರೆ. ಇದನ್ನು ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರ ಸಂವಿಧಾನ ವಿರೋಧಿ ನಿಲುವು ಸ್ಪಷ್ಟವಾಗುತ್ತದೆ ಎಂದರು.
ಅಚ್ಛೆ ದಿನ್ ಆಯೇಗಾ ಎಂದ ನರೇಂದ್ರ ಮೋದಿಯವರೇ ಎಲ್ಲಿದೆ ನಿಮ್ಮ ಅಚ್ಛೆ ದಿನ್ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್ ಬೆಲೆ ಇಳಿಕೆ ಮಾಡಿದಿರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾಷಣ ಮಾಡಿದ ಮೋದಿಯವರೇ ಈ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಲ್ಲಿವೆ 20 ಕೋಟಿ ಉದ್ಯೋಗ ತೋರಿಸಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಬರಗಾಲ ಬಂದಿದೆ. ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರುಪಾಯಿ ಬರ ಪರಿಹಾರವನ್ನೂ ತರಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾವು 2013ರಿಂದ 2018ರವರೆಗೂ ನುಡಿದಂತೆ ನಡೆದಿದ್ದೇವೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಭಾಗ್ಯಗಳನ್ನು ಜಾರಿಗೆ ತಂದಿದ್ದೇವೆ. ಈಗ ಸರ್ಕಾರ ಬಂದ 7 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೆ ತಂದಿದ್ದೇವೆ. ಇದರಿಂದ ಕರ್ನಾಟಕದ ಬಡವರು ಮತ್ತು ಮಧ್ಯಮ ವರ್ಗದ ಜನರ ಸಂಕಷ್ಟ ಕಡಿಮೆ ಆಗಿದೆ ಎಂದ ಮುಖ್ಯಮಂತ್ರಿಗಳು ಹೌದೋ, ಇಲ್ಲವೋ ಎಂದು ಜನಸ್ತೋಮಕ್ಕೆ ಕೇಳಿದರು. ಜನಸ್ತೋಮ ಹೌದು ಎಂದು ಕೂಗಿ ಚಪ್ಪಾಳೆ ತಟ್ಟಿದರು.
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಕ್ಕೆ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಹಾಗೂ ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.
ಶಾಸಕರಾದ ಪೊನ್ನಣ್ಣ ಮತ್ತು ಮಂಥರಗೌಡ ಅವರ ಅಭಿವೃದ್ಧಿ ಪರ ಕಾಳಜಿ ಮತ್ತು ಎಲ್ಲಾ ಜಾತಿ-ಧರ್ಮದವರನ್ನು, ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ವಿಶಾಲ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರನ್ನು ಆರಿಸಿದ್ದಕ್ಕೆ ಕೊಡಗಿನ ಜನತೆಗೂ ಅಭಿನಂದಿಸಿದರು.