ಮಾ. 26ರಂದು ಬನಹಟ್ಟಿಗೆ ಸಿಎಂ ಬೊಮ್ಮಾಯಿ

ಸಿಎಮ್
Advertisement

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗು ಉದ್ಘಾಟನೆ ಕಾರ್ಯಕ್ರಮಗಳ ನೇತೃತ್ವಕ್ಕೆ ಬರುವ ಮಾ. 26 ರವಿವಾರದಂದು ಬೆಳಿಗ್ಗೆ 11 ಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಇಂದು ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಸುಮಾರು 1 ಲಕ್ಷ ಚ.ಅಡಿಯಷ್ಟು ಬೃಹತ್ ಶಾಮಿಯಾನ ತಯಾರಿ ವೀಕ್ಷಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲಿಗೆ ಹಿಪ್ಪರಗಿ ಸಂಗಮೇಶ್ವರ ಮಹಾರಾಜರ ಸನ್ನಿಧಿಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಮಹಾರಾಜರ ದರ್ಶನದ ನಂತರ ಹಿಪ್ಪರಗಿಯಲ್ಲಿ 1.6 ಕೋಟಿ ರೂ.ಗಳ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ತದನಂತರ ಬನಹಟ್ಟಿಯಲ್ಲಿ ಜರುಗುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸವದಿ ತಿಳಿಸಿದರು.
ಇದೇ ಸಂದರ್ಭ ಮೊದಲ ಹಂತದ 2.66 ಕೋಟಿ ಹಾಗು ಎರಡನೇ ಹಂತದ 2.09 ಕೋಟಿ ಒಟ್ಟು 4.75 ಕೋಟಿ ವೆಚ್ಚದ ಸಸಾಲಟ್ಟಿ ಶ್ರೀ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ, ಉದ್ಘಾಟನೆ ಸಮಾರಂಭ ಜರುಗಲಿದೆ.
ಜಲ ಜೀವನ ಮಿಷನ್ ಅಡಿಯಲ್ಲಿ 7 ಕೋಟಿ ರೂ.ಗಳ ವೆಚ್ಚದಲ್ಲಿ ಚಿಮ್ಮಡ, ಹಳಿಂಗಳಿ, ಗೊಲಭಾಂವಿ, ಕಾಲತಿಪ್ಪಿ, ಸಸಾಲಟ್ಟಿ ಹಾಗು ಹನಗಂಡಿ ಗ್ರಾಮಗಳ ಪುನಶ್ಚೇತನಕ್ಕೂ ಹಸಿರು ನಿಶಾನೆ ತೋರಲಿದ್ದು, ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದರು.ಸುಮಾರು 25 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಬೃಹತ್ ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಸಚಿವರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಪಿ. ರಾಜೀವ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆಂದು ಸವದಿ ತಿಳಿಸಿದರು.