ಮಾಹಿತಿ ವಲಯದಲ್ಲಿ ಈಗ ಕಳವಳ, ಗೊಂದಲ ಸೃಷ್ಟಿಯಾಗಿವೆ. ಗೋಪ್ಯತೆ ನೆಪದಲ್ಲಿ ಮಾಹಿತಿಯನ್ನು ಅಡಗಿಸಿಡುವ ಕಾರ್ಯ ವ್ಯವಸ್ಥಿತವಾಗಿದೆ ಎಂಬ ಆರೋಪ ಒಂದೆಡೆಯಾದರೆ, ಮಾಹಿತಿ ಹಕ್ಕಿನ ದುರುಪಯೋಗದ ಬಗ್ಗೆ ಹಾಗೂ ನಿಯಂತ್ರಣದ ಕುರಿತು ವ್ಯಾಪಕ ದೂರು ಬಂದಿದೆ.
ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಸಂಸತ್ತು ಅಂಗೀಕರಿಸಿ ರಾಷ್ಟ್ರಾಧ್ಯಕ್ಷರ ಮುದ್ರೆ ಒತ್ತಿದ ನಂತರ, ಮಾಹಿತಿ ಕ್ಷೇತ್ರದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಮಾಹಿತಿ ಹಕ್ಕನ್ನು ಸರ್ಕಾರ ಸಾಕಷ್ಟು ದುರ್ಬಲಗೊಳಿಸಿದೆ ಎಂಬುದನ್ನು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿ, `ಉತ್ತರಿಸಿ ಪ್ರಧಾನ ಮಂತ್ರಿಗಳೇ…., ಎಂದು ಸವಾಲೆಸೆದಿದ್ದಾರೆ.
ಪತ್ರಿಕಾಲಯ ಮತ್ತು ಡಿಜಿಟಲ್ ಮೀಡಿಯಾವನ್ನು ನಿಯಂತ್ರಿಸುವ ಹುನ್ನಾರದಿಂದ ದತ್ತಾಂಶ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ದೇಶದ ಸಂಪಾದಕರ ಒಕ್ಕೂಟ (ಎಡಿಟರ‍್ಸ್ ಗಿಲ್ಡ್) ಆತಂಕ ವ್ಯಕ್ತಪಡಿಸಿದೆ. ಈ ಮಧ್ಯೆ ಮಾಹಿತಿ ಹಕ್ಕು ಕಾಯ್ದೆಗೆ ದತ್ತಾಂಶ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹಲವು ವಿಷಯಗಳನ್ನು ಗೋಪ್ಯತಾ ಪಟ್ಟಿಗೆ ಸೇರಿಸುವ ಮೂಲಕ ಅಧಿಕಾರಿಗಳ, ಸಾರ್ವಜನಿಕರಿಗೆ ಉತ್ತರದಾಯಿತ್ವ ಹೊಂದಿರುವವರ, ಮಂತ್ರಿ ಮಹೋದಯರ, ಹಲವಾರು ಯೋಜನೆಗಳ ಮಾಹಿತಿಯನ್ನು ಬಹಿರಂಗಪಡಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ತತ್ಪರಿಣಾಮ ಈಗ ಮಾಹಿತಿ ಹಕ್ಕು ವೆಬ್‌ಸೈಟ್‌ನಲ್ಲಿ ಹಲವು ಪ್ರಕರಣಗಳ ಮಾಹಿತಿಯನ್ನು ಮರೆಮಾಚಲಾಗಿದೆ ಎನ್ನುವುದನ್ನು ಆರ್‌ಟಿಐ ಕಾರ್ಯಕರ್ತರಷ್ಟೇ ಅಲ್ಲ, ಬುದ್ಧಿಜೀವಿಗಳು, ಚಿಂತಕರು ದಾಖಲೆ ಸಮೇತ ಹೊರಗೆಡವಿದ್ದಾರೆ.
ಭಾರೀ ಹೋರಾಟದ ನಂತರ ೨೦೦೫ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಈ ದೇಶದಲ್ಲಿ ಜಾರಿಗೆ ಬಂದಿದೆ. ಇದರಿಂದ ಸಾರ್ವಜನಿಕರಿಗೆ ಪುಂಖಾನುಪುಂಖವಾಗಿ ಮಾಹಿತಿಗಳು ಹರಿದು ಬಂದ ಪರಿಣಾಮವೇ ದೇಶದ ಹತ್ತಾರ ಬೃಹತ್ ಹಗರಣಗಳು ಬಯಲಿಗೆ ಬಂದದ್ದು. ಓಲಿಂಪಿಕ್ ಹಗರಣ, ೨-ಜಿ ಹಗರಣ, ಬ್ಯಾಂಕ್‌ಗಳಿಗೆ ಮೋಸ ಮಾಡಿ ತಲೆ ಮರೆಸಿಕೊಂಡವರ ಪಟ್ಟಿ, ಆರ್ಥಿಕ-ಸಾಮಾಜಿಕ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಳೆಲ್ಲವುಗಳ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತಾಯಿತು.
ಪತ್ರಿಕೆಗಳು ಮತ್ತು ಮಾಹಿತಿ ಅಪೇಕ್ಷಿಸುವ, ತನ್ಮೂಲಕ ವಾಸ್ತವಾಂಶವನ್ನು ತಿಳಿಯುವ ಮಂದಿಗೆ ಮಾಹಿತಿ ಹಕ್ಕು ಬ್ರಹ್ಮಾಸ್ತ್ರವಾಗಿ ದೊರಕಿತು. ಯಾವಾಗ ತನ್ನ ಕಾಲಬುಡಕ್ಕೇ ಬಂತೋ, ಮಾಹಿತಿ ಹಕ್ಕಿನ ಕುರಿತು ವ್ಯಾಪಕವಾಗಿ ಹೋರಾಡಿದ, ಅಂದಿನ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ, ಈಗಿನ ರಾಷ್ಟ್ರೀಯ ಒಕ್ಕೂಟ ಒಂದೊಂದಾಗಿ ಅದರ ಅಂಗಾಂಗವನ್ನು ಕಡಿದು ಹಾಕುತ್ತಿದೆ. ಮೊದಲು ರಕ್ಷಣೆ, ನಂತರ ಪ್ರಧಾನ ಮಂತ್ರಿ ಕಾರ್ಯಾಲಯ, ಆ ನಂತರ ವಿದೇಶ ವ್ಯವಹಾರ ಒಪ್ಪಂದಗಳ ಮಾಹಿತಿ, ರಾಜಕಾರಣಿಗಳ ವಿದ್ಯಾರ್ಹತೆ, ವೈಯಕ್ತಿಕ ಆದಾಯ ಮಾಹಿತಿ-ಅಪರಾಧಗಳ ಮಾಹಿತಿ ನೀಡದಂತೆ ನಿರ್ಬಂಧಿಸತೊಡಗಿತು. ಹಾಗಾಗಿಯೇ ಸುಳ್ಳು ಮಾಹಿತಿ ನೀಡಿದ ರಾಜಕಾರಣಿಗಳು, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಶಾಸಕರು, ಮಂತ್ರಿಗಳು, ಉತ್ತರದಾಯಿತ್ವ ಹೊಂದಿದ ಅಧಿಕಾರಿಗಳು ಎಲ್ಲರೂ ಈಗ ಅವರ ಅರ್ಹತೆ, ಪದವಿ, ಸಾರ್ವಜನಿಕ ವ್ಯವಹಾರಗಳೆಲ್ಲವನ್ನೂ ಈಗ ಗೋಪ್ಯತೆ ಹೆಸರಿನಲ್ಲಿ ಮರೆಮಾಚಲು ಸಾಧ್ಯವಾಗಿದೆ.
ನಿಜ. ಮಾಹಿತಿ ಹಕ್ಕು ಜನತೆಗೆ ಲಭ್ಯವಾದ ನಂತರ ದುರುಪಯೋಗ ಆಗಿಲ್ಲ ಅಂತಿಲ್ಲ. ಜನಸಾಮಾನ್ಯ, ಸ್ಥಳೀಯ ವಿವಾದಗಳು, ಗಡಿತಂಟೆ ಇತ್ಯಾದಿಗಳಿಂದ ಹಿಡಿದು, ಅಧಿಕಾರಿಗಳ ಬ್ಲ್ಯಾಕ್‌ಮೇಲ್, ಹಣ ವಸೂಲಿಯನ್ನು ದೊಡ್ಡ ದಂಧೆಯನ್ನಾಗಿಸಿಕೊಂಡು, ಉದ್ಯೋಗವನ್ನಾಗಿಸಿಕೊಂಡವರೂ ಸಾಕಷ್ಟು ಜನ ಇದ್ದಾರೆ. ಜನ ರೋಸಿ ಆರ್‌ಟಿಐ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೆಲವರ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ಘಟನೆಗಳು ದೇಶಾದ್ಯಂತ ಸಂಭವಿಸಿವೆ.
ಹಾಗೆಯೇ ಹಲವು ಪ್ರಕರಣಗಳಲ್ಲಿ ಅಕ್ರಮ-ಅವ್ಯವಹಾರಗಳು ಬೆಳಕಿಗೆ ಬಂದಾಗ ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಸಾಕಷ್ಟು ಘಟನೆಗಳು ಕಳೆದ ಹದಿನೈದು ವರ್ಷಗಳಲ್ಲಿ ಸಂಭವಿಸಿವೆ. ಈವರೆಗಿನ ಮಾಹಿತಿ ಪ್ರಕಾರ, ದೇಶದಲ್ಲಿ ಒಂದು ನೂರ ನಾಲ್ಕು ಆರ್‌ಟಿಐ ಕಾರ್ಯಕರ್ತರ ಹತ್ಯೆಗಳು ಸಂಭವಿಸಿವೆ. ಹನ್ನೊಂದು ಹತ್ಯೆಗಳು ಕರ್ನಾಟಕದಲ್ಲಿಯೇ ನಡೆದಿವೆ. ರಾಷ್ಟ್ರಮಟ್ಟದಲ್ಲಿ ೧೮೫ ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿವೆ. ಕರ್ನಾಟಕದಲ್ಲಿ ಅಂತಹ ಹದಿನೆಂಟು ಪ್ರಕರಣಗಳು ದಾಖಲಾಗಿವೆ.
ಇದೊಂದು ಮುಖ. ಅದರಲ್ಲಿ ಕೆಲವು ಬ್ಲ್ಯಾಕ್‌ಮೇಲ್ ಪ್ರಕರಣಗಳಿರಬಹುದು. ಇನ್ನು ಕೆಲವು ಸಾರ್ವಜನಿಕ ಹಿತಾಸಕ್ತಿಗಾಗಿ ಜನರೇ ಇಂತಹ ದಂಧೆಗೆ ಇಳಿದವರ ವಿರುದ್ಧ ಹೋರಾಡಿದ್ದೂ ಇರಬಹುದು. ಕೀಟಲೆ ಸಾಕಾಗಿ ಬೇಸತ್ತ ಪ್ರಕರಣಗಳೂ ಸಾಕಷ್ಟಿವೆ. ಪ್ರತಿ ನಗರ, ತಾಲ್ಲೂಕು, ಪ್ರಮುಖ ವಿಷಯಗಳ ಮೇಲೆ ಆರ್‌ಟಿಐ ಹೆಸರಿನಡಿ ನೂರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಮಾಹಿತಿ ಹಕ್ಕು ಆಯೋಗ ಮತ್ತು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಂತೆ ಕಾಯ್ದೆ ದುರುಪಯೋಗಪಡಿಸಿಕೊಂಡವರನ್ನು ನಿಯಂತ್ರಿಸುವ ಯಾವುದೇ ಕ್ರಮ-ಕಾನೂನು ಈ ಕಾಯ್ದೆಯಲ್ಲಿ ಇಲ್ಲ.
ಎರಡನೆಯದ್ದಾಗಿ ಮಾಹಿತಿ ಕೋರುವ ಅನೇಕರಿಗೆ ಸ್ಪಷ್ಟತೆ, ಸಂಬಂಧ ಇಲ್ಲದಿದ್ದರೂ, ಹಲವು ವಿಷಯಗಳನ್ನು ದುರುದ್ದೇಶಪೂರಿತ ಕಾರಣಗಳಿಗೇ ತಿಳಿದುಕೊಳ್ಳುವುದು ಇಂಥವರ ಉದ್ದೇಶ. ಇದಕ್ಕೆ ನಿಯಂತ್ರಣವೂ ಇಲ್ಲ. ಹಾಗಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ಐದು ನೂರು ರೂಪಾಯಿಯಿಂದ ಕೋಟ್ಯಂತರ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶ ಉಂಟು. ಇದೇ ಈ ಬ್ಲ್ಯಾಕ್‌ಮೇಲಿಸ್ಟ್‌ಗಳ ಅಸ್ತ್ರ.
ಇತ್ತೀಚಿನ ಒಂದು ಉದಾಹರಣೆ ಗಮನಿಸಿದರೆ ಮಾಹಿತಿ ಹಕ್ಕಿನ ದುರುಪಯೋಗ ಹೇಗಾದೀತು ಎಂದು ತಿಳಿಯಬಹುದು. ಹುಬ್ಬಳ್ಳಿಯ ದಾವಲ್‌ಸಾಬ್ ಎಂ. ಮಿಯಾನವರ ಎಂಬುವರು ಸರ್ಕಾರದ ಹದಿನಾರು ಇಲಾಖೆಗಳಿಗೆ ಸಂಬಂಧಿಸಿ ಮಾಹಿತಿ ಆಯೋಗಕ್ಕೆ ೬೯೪೬ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು. ಇಷ್ಟನ್ನೂ ಆಯೋಗ ವಜಾಗೊಳಿಸಿತು. ಇಷ್ಟು ದೊಡ್ಡ ಸಂಖ್ಯೆಯ ಮೇಲ್ಮನವಿಗಳನ್ನು ಏಕಕಾಲಕ್ಕೆ ವಿಚಾರಣೆ ನಡೆಸಿ ವಜಾಗೊಳಿಸಿರುವುದು ಹೇಗೆ ಇತಿಹಾಸವೋ, ಇಷ್ಟು ಮೇಲ್ಮನವಿ ಸಲ್ಲಿಸಿದ ಈ ವ್ಯಕ್ತಿಯ ಉದ್ದೇಶ ಮಾತ್ರ ಗೊತ್ತಿಲ್ಲ. ಇಷ್ಟು ಸಂಖ್ಯೆಯ ಮೇಲ್ಮನವಿಗಳ ವಿಚಾರಣೆ ನಡೆಸಿದಾಗ ಆಯೋಗದ ಮುಖ್ಯ ಆಯುಕ್ತರೇ ಆತಂಕಿತರಾದರು. ಈ ಪ್ರಕರಣಗಳ ಪ್ರತಿವಾದಿಗಳಿಗೆ ನೋಟಿಸ್ ನೀಡಿ ಖುದ್ದು ಹಾಜರಿಗೆ ತಿಳಿಸಿದರೆ, ಹದಿನೈದು ಸಾವಿರಕ್ಕೂ ಅಧಿಕ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು, ಅವರನ್ನು ಕರೆಸಬೇಕು, ವಿಚಾರಣೆ ನಡೆಸಬೇಕು. ಬಹುತೇಕವಾಗಿ ಅವರು ಕೋರಿರುವುದು ಸ್ಥಳೀಯ ಕಾಮಗಾರಿಗಳು, ಪಿಡಬ್ಲೂಡಿ, ನಗರಸಭೆ, ಪಂಚಾಯತ್, ಜಿಲ್ಲಾ ಪಂಚಾಯ್ತಿ, ಕಂದಾಯ ಇತ್ಯಾದಿ ಇಲಾಖೆಗಳದ್ದು. ಮಿಯಾನವರ ಹಿಂದಿನ ಉದ್ದೇಶ ಏನು ಎನ್ನುವುದು ಮೇಲ್ನೋಟಕ್ಕೆ ಸಾಮಾನ್ಯರು ಪ್ರಶ್ನಿಸುವಂತಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗ ಪಡಿಸಿಕೊಳ್ಳುವರ ಸಂಖ್ಯೆ, ಈ ಕಾಯ್ದೆಯ ಅಗತ್ಯತೆ ಕುರಿತು ಹೋರಾಡಿದವರ ಮಹತ್ವವನ್ನು ಕಡೆಗಣಿಸಿದಂತಾಗಿದೆ. ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ತಡೆಗೆ ಕಾನೂನಿನಲ್ಲಿ ಯಾವುದೇ ನಿಯಮ ಇಲ್ಲ. ಮಾಹಿತಿ ಆಯೋಗ ಕಣ್ಮುಚ್ಚಿ ಕುಳಿತಿರಬೇಕೇ ಎನ್ನುವುದು ಈಗ ಪ್ರಶ್ನೆ.
ಮತ್ತೊಂದೆಡೆ ಸುಪ್ರೀಂ ಕೋರ್ಟ್ ಕೂಡ ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ತಡೆಯಲೇಬೇಕಿದೆ. ಇದಕ್ಕೊಂದು ನಿಯಂತ್ರಣ ರೂಪಿಸಿ ಎಂದು ನಿರ್ದೇಶಿಸಿತ್ತು.
ಸರಿ, ಇಷ್ಟು ನಿರ್ದೇಶನ ಸಿಕ್ಕಿದ್ದೇ ತಡ ಈಗ ಡಿಜಿಟಲ್ ಪ್ರೊಟೆಕ್ಷನ್ ಆ್ಯಕ್ಟ್ಅನ್ನು ಸಂಸತ್ತಿನಲ್ಲಿ ಮಂಡಿಸಿ, ತನ್ಮೂಲಕ ಮಾಹಿತಿ ಹಕ್ಕು ಕಾಯ್ದೆಯ ಹಲವು ಅಂಶಗಳಿಗೆ ನಿಯಂತ್ರಣ ಹೇರಲಾಗಿದೆ. ಅದರಲ್ಲಿ ನೆಪ ಸೇರಿಸಿದ್ದು ಖಾಸಗಿತನ ಬಯಲು ಮಾಡಬಾರದೆಂದು !
ಡಿಜಿಟಲ್ ಪ್ರೊಟೆಕ್ಷನ್ ಆ್ಯಕ್ಟ್ ಬರುವ ಪೂರ್ವ ಮಾಹಿತಿ ಹಕ್ಕು ಕಾಯ್ದೆಯನ್ನು ಕೇಂದ್ರೀಯ ಆಯೋಗ ಸಾಂಸ್ಥಿಕ ಅಸ್ತಿತ್ವವನ್ನು ಮೂಲೆಗುಂಪು ಮಾಡಿತು. ಸಂಸದೀಯ ಸೆಲೆಕ್ಟ್ ಸಮಿತಿಯ ಮುಂದೆಯೂ ತಂದಿಲ್ಲ. ಕಳೆದ ಸಾರಿ ಮಾಹಿತಿ ಆಯೋಗದ ತಿರುಳಿನ ಮೇಲೆ ಏಕಾಏಕಿ ಪ್ರಹಾರ ಮಾಡಿತು. ವರ್ಷಾನುಗಟ್ಟಲೆ ಏಂದ್ರ ಮಾಹಿತಿ ಆಯೋಗಕ್ಕೆ ಮುಖ್ಯಸ್ಥರೇ ಇರಲಿಲ್ಲ. ಮಾಹಿತಿ ಆಯೋಗದ ಅಧ್ಯಕ್ಷರು, ಅವರ ನೇಮಕ, ಸಂಬಳ ಇತ್ಯಾದಿಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಿತು. ಕಮೀಷನರ್‌ಗಳ ಅಧಿಕಾರಾವಧಿ ಮತ್ತು ಅವರ ವೇತನ ನಿಗದಿ ಪಡಿಸುವ ಅಧಿಕಾರವನ್ನು ಕೇಂದ್ರ ಪಡೆದುಕೊಂಡಿತು.
ಆರ್‌ಟಿಐ ಕಾಯ್ದೆಯಡಿ ಪ್ರತಿವರ್ಷ ಸುಮಾರು ೬೦ ಲಕ್ಷ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಬಹುಶಃ ಇದು ಅತೀ ಹೆಚ್ಚು ಬಳಕೆ ಮಾಡುತ್ತಿರುವ ಶಾಸನ. ಈಗ ಎದ್ದಿರುವ ಪ್ರಶ್ನೆ, ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ಸರ್ಕಾರ ತನ್ನನ್ನು ಆಯ್ಕೆ ಮಾಡಿರುವ ಜನರಿಗೆ ಏಕೆ ಮಾಹಿತಿಗಳನ್ನು ನಿರಾಕರಿಸುತ್ತಿದೆ ಎನ್ನುವುದು.
ಇದು ಮೂಲಭೂತ ಹಕ್ಕೇ ಆಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಹಲವು ಬಾರಿ ಸ್ಪಷ್ಟಪಡಿಸಿದರೂ, ಮಾಹಿತಿ ಹಕ್ಕು ಆಯೋಗ ಮತ್ತು ನ್ಯಾಯಾಲಯಗಳು ನಿರ್ದೇಶನ ನೀಡಿದರೂ, ಮಾಹಿತಿ ನಿರಾಕರಿಸುತ್ತಿರುವ ಪ್ರಕರಣಗಳು ಈಗ ಜಾಸ್ತಿಯಾಗುತ್ತಿವೆ ಎನ್ನುವ ಆತಂಕ ಮಾಹಿತಿ ಕ್ಷೇತ್ರದಲ್ಲಿ ಇರುವವರದ್ದು. ಪತ್ರಕರ್ತರು ಮಾಹಿತಿ ಹಕ್ಕಿನ ಮೊರೆ ಹೋಗುತ್ತಿರುವುದು ಸಾಮಾನ್ಯ. ಈಗ ಅಂತಹ ಪತ್ರಕರ್ತರ ಮೇಲೂ ತಾನು ಆಯ್ಕೆ ಮಾಡಿದ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಂತಹ ಆಳುವ ದೊರೆಗಳನ್ನು ಪ್ರಶ್ನಿಸಬಾರದು ಎನ್ನುವ ಅಂಶವನ್ನು ತರಲಾಗಿದೆ.
ಇದು ಆರಂಭವಾಗಿದ್ದು ಪ್ರಧಾನ ಮಂತ್ರಿಗಳ ಪದವಿ, ಬ್ಯಾಂಕುಗಳಿಗೆ ಕೋಟ್ಯಂತರ ಮೋಸ ಮಾಡಿ ಪರಾರಿಯಾದವರ ವಿವರ, ಇಂಥವರ ಅಸಲು-ಬಡ್ಡಿ-ಸಾಲ ಮನ್ನಾ, ಹಲವು ಪ್ರಕರಣಗಳ ಡೀಲ್‌ಗಳ ಕುರಿತು, ಕೋವಿಡ್ ಅವ್ಯವಹಾರದ ಮಾಹಿತಿ ಇತ್ಯಾದಿಗಳನ್ನು ಅಪೇಕ್ಷಿಸಿದಾಗ.
ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್- ೨೦೨೩ ಮೊನ್ನೆ ಮೊನ್ನೆ ಅಂಗೀಕಾರಗೊಂಡ ನಂತರ ಮಾಹಿತಿ ಕ್ಷೇತ್ರದ ಆತಂಕ ಹೆಚ್ಚಲು ಕಾರಣವಾಗಿದೆ. ಹಾಗೂ ವೈಯಕ್ತಿಕ ಡಾಟಾ ಸಂರಕ್ಷಿಸಲು ಇದು ಬೇಕಿದ್ದರೂ, ಅಗತ್ಯವಿದ್ದರೂ, ಇದನ್ನು ತರುವ ಉದ್ದೇಶ ಮಾತ್ರ ಗೊಂದಲಕ್ಕೆ ಈಡಾಗಿದೆ. ಇದು ಇಂಟರ್‌ನೆಟ್ ಪತ್ರಕರ್ತರು ಮತ್ತು ಸಂಪಾದಕರಿಗೆ ಮಾತ್ರವಲ್ಲ. ಇಂಟರ್‌ನೆಟ್ ಬಳಸುವ ಎಲ್ಲ ನಾಗರಿಕರ ಬಗ್ಗೆ ಮತ್ತು ಅವರ ಹಕ್ಕುಗಳ ಹಿತಕ್ಕೆ ಮುಖ್ಯವಾಗಿದೆ, ವೈಯಕ್ತಿಕ ಮಾಹಿತಿಗೆ ಯಾರೂ ಕನ್ನ ಹಾಕುವಂತಿಲ್ಲ ಎಂದು ಸರ್ಕಾರ ಹೇಳಿದರೂ ಕೂಡ, ದುರುದ್ದೇಶ ಇರುವುದು ಸಾರ್ವಜನಿಕ ಹಿತಕ್ಕೆ ಧಕ್ಕೆಯಾಗುವಂತಹ ಗಣ್ಯರ ಮಾಹಿತಿಯನ್ನು ರಕ್ಷಿಸಲು ಎಂಬುದು ವ್ಯಾಪಕವಾಗಿರುವ ಆತಂಕ. ಈಗಾಗಲೇ ಎಡಿಟರ‍್ಸ್ ಗಿಲ್ಡ್ ಆದಿಯಂತೆ ಹಲವು ಚಿಂತಕರು ಡಿಪಿಡಿಪಿ ಕಾಯ್ದೆಯ ಗೂಡಾರ್ಥವನ್ನು ಪ್ರಶ್ನಿಸಿದ್ದಾರೆ. ಈ ಕಾಯ್ದೆಯ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ನಿಯಂತ್ರಿಸುವ ಹುನ್ನಾರ ಎಂಬುದು ಆರೋಪ.
ಸರ್ಕಾರ ಕಳೆದ ಏಳೆಂಟು ವರ್ಷಗಳಿಂದೀಚೆಗೆ ನಡೆದುಕೊಂಡ ರೀತಿ ಅನುಮಾನಾಸ್ಪದವಾಗಿರುವುದರಿಂದ ಕನಿಷ್ಠ ಈ ಕಾಯ್ದೆಯನ್ನು ಚರ್ಚೆಗಾದರೂ ಬಿಡಬಹುದಿತ್ತು ಎನ್ನುವುದು ಜನಾಶಯ. ಮಾಹಿತಿ ಹಕ್ಕಿನ ಕಾಯ್ದೆ ದುರುಪಯೋಗ ಆಗದಂತೆ ನೋಡಿಕೊಳ್ಳಲು ಅದಕ್ಕೊಂದು ರೂಪುರೇಷೆ ನೀಡಬೇಕಾದದ್ದು ಅನಿವಾರ್ಯವಾಗಿದ್ದರೂ ಅದನ್ನು ಮಾಡದೇ ನಿಗೂಢ ನಡೆ ಇಟ್ಟಿದ್ದು ಮಾತ್ರ ಆತಂಕಕಾರಿಯೇ. ಹಾಗಾಗಿ ಮಾಹಿತಿ ತಟ್ಟೆಯಲ್ಲಿ ಅಲೆ ಎದ್ದಿದೆ…. ಈಗಂತೂ ದನಿ ಎತ್ತುವ ಧೈರ್ಯವನ್ನು ಯಾರೂ ತೋರರು!