ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಂಸ್ಥಾಪನಾ ಬೆಳ್ಳಿಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಮಾಸಿಕ ಪಾಸುಗಳಿಗೆ ಹೆಚ್ಚುವರಿ ದಿನಗಳ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್. ಎಸ್ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥಾಪನಾ ರಜತ ಮಹೋತ್ಸವದ ಕೊಡುಗೆಯಾಗಿ ದ್ವಿ ಮಾಸಿಕ ಹಾಗೂ ತ್ರೈ ಮಾಸಿಕ ಪಾಸುಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಒಂದು ತಿಂಗಳ ಪಾಸ್‌ಗೆ 2ದಿನ, ಎರಡು ತಿಂಗಳ ಪಾಸ್‌ಗೆ 5 ದಿನ ಹಾಗೂ ಮೂರು ತಿಂಗಳ ಪಾಸ್‌ಗೆ 10 ದಿನಗಳ ಹೆಚ್ಚುವರಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಸ್‌ದಾರರು ದಿನಕ್ಕೆ ಎಷ್ಟು ಸಲ ಬೇಕಾದರೂ ಪ್ರಯಾಣ ಮಾಡಬಹುದು. ಇದರಿಂದ ಪಾಸು ಪಡೆಯುವವರಿಗೆ ಸಮಯ ಹಾಗೂ ಬಸ್ ಟಿಕೆಟ್ ಹಣದಲ್ಲಿ ಬಹಳಷ್ಟು ಉಳಿತಾಯವಾಗಲಿದೆ.
ಸಾರ್ವಜನಿಕರು ಒಂದು ತಿಂಗಳ ಪಾಸ್ ಪಡೆದರೆ ಸರಾಸರಿ ಇಪತ್ತು ದಿನಗಳ ಬಸ್ ಟಿಕೆಟ್ ಹಣದಲ್ಲಿ 32ದಿನಗಳ ಅವಧಿಗೆ ಪ್ರಯಾಣ ಮಾಡಬಹುದು. ದ್ವಿ ಮಾಸಿಕ ಪಾಸ್ ಪಡೆದರೆ 40 ದಿನಗಳ ಬಸ್ ಟಿಕೆಟ್ ಹಣದಲ್ಲಿ 65 ದಿನ ಪ್ರಯಾಣ ಮಾಡಬಹುದಾಗಿದೆ. ತ್ರೈ ಮಾಸಿಕ ಪಾಸ್ ಪಡೆದರೆ 60 ದಿನಗಳ ಬಸ್ ಟಿಕೆಟ್ ಹಣದಲ್ಲಿ 100 ದಿನಗಳ ಅವಧಿಗೆ ಪ್ರಯಾಣ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಬಸ್ ನಿಲ್ದಾಣವನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.