ಶಿವಮೊಗ್ಗ: ಇಲ್ಲಿಗೆ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಮಣಿಕಂಠ ಹೆಸರಿನ ಸಾಕಾನೆ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮಾವುತನನ್ನು ಓಡಿಸಿಕೊಂಡು ಹೋದ ಘಟನೆ ಶನಿವಾರ ನಡೆದಿದೆ.
ಆನೆ ಮಾವುತನನ್ನು ಬೆನ್ನಟ್ಟಿ ಹೋಗುತ್ತಿರುವ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಂದಿನಂತೆ ಬಿಡಾರದಿಂದ ಮಣಿಕಂಠ ಆನೆಯನ್ನು ಕಾಡಿಗೆ ಕರೆದೊಯ್ಯಲಾಗುತ್ತಿತ್ತು. ಮಾವುತ ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ. ಜಂಗಲ್ ರೆಸಾರ್ಟ್ ಗೇಟ್ ಬಳಿಯ ಹೆದ್ದಾರಿಯಲ್ಲಿ ಆನೆ ದಿಢೀರ್ ನಿಂತುಕೊಂಡಿದೆ.
ಸ್ಕೂಟರ್‌ನಲ್ಲಿ ಬರುತ್ತಿದ್ದ ಮಾವುತನ ಮೇಲೆ ದಾಳಿಗೆ ಮುಂದಾಗಿದೆ. ತಕ್ಷಣವೇ ಮಾವುತ ರಸ್ತೆಯಲ್ಲಿಯೇ ಸ್ಕೂಟರ್ ನಿಲ್ಲಿಸಿ ಓಡಿ ಹೋಗಿದ್ದಾನೆ. ನಂತರ ಆನೆಯೂ ಆತನನ್ನು ಬೆನ್ನಟ್ಟಿ ಓಡಿದೆ.
ಬಿಡಾರದೊಳಗಿದ್ದ ಮಾವುತ ಹಾಗೂ ಕಾವಾಡಿಗಳು ಇತರೆ ಆನೆಗಳ ನೆರವಿನೊಂದಿಗೆ ಮಣಿಕಂಠನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.