ಬಿಕ್ಕಟ್ಟನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಮೂವರು ಮಂತ್ರಿಗಳನ್ನು ಅಮಾನತು ಮಾಡಿ ಏನೂ ಆಗಿಯೇ ಇಲ್ಲ ಎಂಬಂತೆ ಬೀಗಲು ಹೊರಟಿರುವ ಮಾಲ್ಡೀವ್ಸ್ ಸರ್ಕಾರಕ್ಕೆ ಈಗ ಏಣಿಯಾಗಿರುವುದು ಚೀನಾ ದೇಶ ಎಂಬುದು ಬಹಿರಂಗ ಗುಟ್ಟು.
ಭಾರತೀಯ ಉಪಖಂಡದಲ್ಲಿ ಹಿಂಬಾಗಿಲಿನಿಂದ ಸಾರ್ವಭೌಮತ್ವವನ್ನು ಸ್ಥಾಪಿಸಲು ಸನ್ನಾಹ ಮಾಡುತ್ತಿರುವ ಚೀನಾ ದೇಶ ಬದಲಾದ ಸನ್ನಿವೇಶದಲ್ಲಿ ಮಾಲ್ಡೀವ್ಸ್ ಜೊತೆಗೆ ಮಿತ್ರತ್ವ ರೂಢಿಸಿಕೊಂಡು ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಹೊರಟಿರುವುದು ಜಾಗತಿಕ ರಾಜಕಾರಣದ ಹೊಸ ನಾಟಕ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ್ ಮೊದಲಾದ ದೇಶಗಳಲ್ಲಿ ಭಾರತದ ವಿರುದ್ಧ ಇದೇ ರೀತಿಯ ಛೂಮಂತ್ರಗಾಳಿ ಕುತಂತ್ರವನ್ನು ಕಾರ್ಯರೂಪಕ್ಕೆ ತಂದು ಆ ದೇಶಗಳ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದ್ದರೂ ಮಾಲ್ಡೀವ್ಸ್ ಚೀನಾದ ಪಿತೂರಿಗೆ ಬಲಿಯಾಗುತ್ತಿರುವುದು ಅರ್ಥವಾಗದ ಬೆಳವಣಿಗೆ. ಮಾಲ್ಡೀವ್ಸ್ನಲ್ಲಿ ನಡೆದ ಚುನಾವಣೆಯಲ್ಲಿ ಈಗ ಮಹಮದ್ ಮಯೀಜು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಕೈಗೊಂಡ ಪ್ರವಾಸದಿಂದ ಕಂಗೆಟ್ಟು ಬಾಯಿಗೆ ಬಂದಂತೆ ಟೀಕೆಗಳನ್ನು ಮಾಡಿ ವಿವಾದವನ್ನು ಆಹ್ವಾನಿಸಿಕೊಂಡಿರುವ ಮೂವರು ಮಂತ್ರಿಗಳ ವರ್ತನೆ ಸಾಮಾನ್ಯ ಬೆಳವಣಿಗೆಯಂತೂ ಅಲ್ಲ. ಬಿಕ್ಕಟ್ಟನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಮೂವರು ಮಂತ್ರಿಗಳನ್ನು ಅಮಾನತು ಮಾಡಿ ಏನೂ ಆಗಿಯೇ ಇಲ್ಲ ಎಂಬಂತೆ ಬೀಗಲು ಹೊರಟಿರುವ ಮಾಲ್ಡೀವ್ಸ್ ಸರ್ಕಾರಕ್ಕೆ ಈಗ ಏಣಿಯಾಗಿರುವುದು ಚೀನಾ ದೇಶ ಎಂಬುದು ಬಹಿರಂಗ ಗುಟ್ಟು. ಈಗಿನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಚೀನಾ ಪರವಾದ ನಿಲುವನ್ನು ಘೋಷಿಸುವ ಸಂದರ್ಭದಲ್ಲಿಯೇ ಭಾರತಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಅಧ್ಯಕ್ಷ ಮಯೀಜು ಗುಟುರು ಹಾಕಿ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವಂತೆ ಷರತ್ತು ಹಾಕುವ ಹಿಂದಿರುವುದು ಚೀನಾದ ಕಿತಾಪತಿ. ಇದಿಷ್ಟು ಸಾಲದು ಎಂಬಂತೆ ಅಧಿಕಾರಕ್ಕೆ ಬಂದ ನಂತರ ಆದ್ಯತೆಯ ಮೇರೆಗೆ ಚೀನಾ ದೇಶದ ಪ್ರವಾಸ ಕೈಗೊಂಡಿರುವ ಮಯೀಜು ಕ್ರಮ ಭಾರತಕ್ಕೆ ಎಚ್ಚರಿಕೆ ನೀಡುವುದಷ್ಟೆ ಅಲ್ಲ ಇನ್ನು ಮುಂದೆ ಮಾಲ್ಡೀವ್ಸ್ನ ಚಟುವಟಿಕೆಯಿಂದ ದೂರ ಉಳಿಯುವಂತೆ ಕೊಟ್ಟಿರುವ ಸಂದೇಶವೂ ಆಗಿದೆ.
ಚೀನಾ ದೇಶಕ್ಕೆ ಮೊದಲಿನಿಂದಲೂ ನೆರೆರಾಷ್ಟçಗಳ ಭುಜದ ಮೇಲೆ ಬಂದೂಕನ್ನು ಇಟ್ಟು ಭಾರತದ ಮೇಲೆ ಗುಂಡು ಹಾರಿಸುವ ತಂತ್ರವನ್ನು ಪ್ರಯೋಗಿಸುತ್ತಿರುವುದು ಬಹಿರಂಗ ಗುಟ್ಟು. ಇದಕ್ಕೆ ಈಗ ಮಾಲ್ಡೀವ್ಸ್ ಸರದಿ ಬಂದಿದೆ ಅಷ್ಟೆ. ಹಿಂದೂ ಮಹಾಸಾಗರದ ದ್ವೀಪರಾಷ್ಟ್ರವಾದ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ದೇಶ. ಮುತ್ತು ಹವಳಗಳಿಗೆ ಹೆಸರಾಗಿರುವ ಈ ದೇಶಕ್ಕೆ ಭಾರತೀಯರೇ ಹೆಚ್ಚು ಮಂದಿ ಪ್ರವಾಸಿಗರಾಗಿ ಹೋಗುತ್ತಿರುವುದು ಅಂಕಿ ಅಂಶಗಳಿಂದ ಗೊತ್ತಾಗುವ ವಿಚಾರ. ಮಾಲ್ಡೀವ್ಸ್ ದ್ವೀಪಕ್ಕೆ ಸರಿಸಾಟಿಯಾಗಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ಪ್ರವಾಸ ಸಹಜವಾಗಿಯೇ ಮಾಲ್ಡೀವ್ಸ್ ಸರ್ಕಾರಕ್ಕೆ ತಳಮಳ ತಂದಿರಬೇಕು. ಭಾರತದ ಅನೇಕ ಚಲನಚಿತ್ರಗಳ ಚಿತ್ರೀಕರಣ ನಡೆಯುವುದು ಮಾಲ್ಡೀವ್ಸ್ ದ್ವೀಪದಲ್ಲಿಯೇ. ಭಾರತೀಯ ಉದ್ಯಮಿಗಳ ಹೂಡಿಕೆಯ ಪ್ರಮಾಣವೂ ಇಲ್ಲಿ ಹೆಚ್ಚು. ಈ ಹಿಂದೆ ಶಿವಸಾಗರ್ ರಾಮ್ ಗುಲಾಮ್ ಹಾಗೂ ಅನಿರುದ್ಧ ಜಗನ್ನಾಥ್ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತಕ್ಕೆ ಆದ್ಯತೆಯ ರಾಷ್ಟ್ರ ಎಂದು ಪರಿಗಣಿಸಿ ಎಲ್ಲ ರೀತಿಯ ಮಾನ್ಯತೆಗಳನ್ನು ಒದಗಿಸಿತ್ತು. ಭಾರತವೂ ಕೂಡಾ ಇದಕ್ಕೆ ಪ್ರತಿಯಾಗಿ ಮಾಲ್ಡೀವ್ಸ್ಗೆ ಅಗತ್ಯವಾದ ರಕ್ಷಣೆಯನ್ನು ನೀಡುತ್ತಾ ಬಂದಿತ್ತು. ಆದರೆ, ಅಮೆರಿಕ ಪ್ರಾಬಲ್ಯವನ್ನು ಹಿಂದೂ ಮಹಾಸಾಗರದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಗಳಿಗೆ ತಾಗಿಕೊಂಡಿರುವ ರಾಷ್ಟ್ರಗಳಲ್ಲಿ ಚೀನಾ ಸೈನಿಕ ನೆಲೆಯನ್ನು ಆರಂಭಿಸಿರುವುದು ಈಗಾಗಲೇ ಬಯಲಿಗೆ ಬಂದಿರುವ ಸಂಗತಿ. ಶ್ರೀಲಂಕಾದ ದಿವಾಳಿ ಪರಿಸ್ಥಿತಿಗೆ ಚೀನಾ ದೇಶವೇ ಕಾರಣ ಎಂಬುದನ್ನು ಹೇಳಲು ಅರ್ಥಶಾಸ್ತ್ರಜ್ಞರು ಬೇಕಿಲ್ಲ. ಮಾಲ್ಡೀವ್ಸ್ ಬಳಸಿಕೊಂಡು ಭಾರತವನ್ನು ದಿಗ್ಬ್ರಾಂತಗೊಳಿಸುವ ಕ್ರಮದ ಭಾಗವಾಗಿ ಈಗ ಚೀನಾ ದೇಶ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳಲು ಕಾರ್ಯೋನ್ಮುಖವಾಗಿದೆ.
ಮಾಲ್ಡೀವ್ಸ್ನ ಹದ್ದುಮೀರಿದ ವರ್ತನೆಗೆ ಭಾರತ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದೆ. ಆದರೆ, ಈಗ ಆಗಬೇಕಾದದ್ದು ಜಾಗತಿಕ ಮಟ್ಟದಲ್ಲಿ ಮಾಲ್ಡೀವ್ಸ್ನ ದುಂಡಾವರ್ತಿಯ ಹಿಂದೆ ಚೀನಾದ ವ್ಯವಸ್ಥಿತ ಪಿತೂರಿ ಜರುಗುತ್ತಿರುವ ವಿಚಾರದ ಚರ್ಚೆ. ವಿಶ್ವಸಂಸ್ಥೆಯಲ್ಲಿ ಇಂತಹ ವಿಚಾರಗಳು ಪ್ರಸ್ತಾಪವಾದರೆ ಆಗ ಚೀನಾ ದೇಶದ ಬೊಂಬೆಯಾಟಕ್ಕೆ ತಡೆಬೀಳಲು ಸಾಧ್ಯವಾಗುತ್ತದೆ.