ದಾವಣಗೆರೆ: ಕಾಂಗ್ರೆಸ್ ಸರ್ಕಾರ ಮತಾಂಧರಂತೆ ವರ್ತಿಸಿದವರ ಮೇಲೆ ಕ್ರಮ ಕೈಗೊಳ್ಳದೇ ದೌರ್ಜನ್ಯಕ್ಕೆ ಒಳಗಾದವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಮಾರ್ಜಾಲ(ಬೆಕ್ಕು) ನ್ಯಾಯದ ರೀತಿ ವರ್ತನೆ ಮಾಡುತ್ತಿದ್ದು, ಇದರಿಂದ ಮತಾಂಧತೆಗೆ ಕುಮ್ಮಕ್ಕು ಸಿಗುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಶಿವಮೊಗ್ಗ ರಾಗಿಗುಡ್ಡದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ ಮಿಲಾದ್‌ನಲ್ಲಿ ಔರಂಗಜೇಬ, ಟಿಪ್ಪು ಸುಲ್ತಾನನ ಭಾವಚಿತ್ರ ಇಟ್ಟುಕೊಂಡು ವೈಭವೀಕರಿಸಲು ಬಿಟ್ಟಿದ್ದೇ ಒಂದು ಅಪರಾಧ. ಔರಂಗಜೇಬ ದೇವಾಲಯಗಳ ಧ್ವಂಸಮಾಡಿ, ಹಿಂದೂಗಳ ಮೇಲೆ ತಲೆ ಕಂದಾಯ ಹೇರಿದವನು, ಹಿಂದೂಗಳ ತೀರ್ಥಯಾತ್ರೆ ನಿರ್ಬಂಧಿಸಿದವನು, ಲಕ್ಷಾಂತರ ಜನರನ್ನು ಕೊಂದು, ಲಕ್ಷಾಂತರ ಜನರನ್ನು ಮತಾಂತರ ಮಾಡಿರುವವನು, ಇಂಥವನ ಭಾವಚಿತ್ರ ಮೆರೆಸುವ ಮೂಲಕ ಅವರೊಂದು ಸಂದೇಶ ರವಾನಿಸಿರುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸೂಚ್ಯವಾಗಿ ಹೇಳಿದರು. ರಾಮಲಿಂಗರೆಡ್ಡಿ ಹಿರಿಯರು, ಅವರು ತಲೆಕೆಟ್ಟವರ ತರಹ ಮಾತಾಡಬಾರದು. ಅವರು ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.
ಅಸಲಿ ಹಿಂದೂಗಳೇ ಕುಂಕುಮ ಬೇಡ ಅಂತಾರೆ, ಭಗವಧ್ವಜ ಬೇಡ ಅಂತಾರೆ, ಮುಸ್ಲಿಂರ ಟೋಪಿ ಮಾತ್ರ ಆನಂದವಾಗಿ ಹಾಕಿಕೊಳ್ಳುತ್ತಾರೆ. ಅವರು ಅಸಲಿಗಳು ಹಾಗಾಗಿ ಟಿಪ್ಪು ಸುಲ್ತಾನ್, ಔರಂಗಜೇಬ ಎಂದರೆ ಮಾತ್ರ ಅವರಿಗೆ ಪ್ರೀತಿ, ನಾಳೆ ಬಿನ್‌ಲಾಡೇನ್ ಅಂದರು ಅವರಿಗೆ ಅಸಲಿಗಳಲ್ಲವಾ ಹಾಗಾಗಿ ಪ್ರೀತಿ. ನಾವು ನಾವು ಕುಂಕುಮ ಇಟ್ಟುಕೊಳ್ಳುತ್ತೇವೆ, ಕೇಸರಿ ಶಾಲು ಹಾಕಿಕೊಳ್ಳುತ್ತೇವೆ ಮತ್ತು ಭಾರತ ಮಾತಕೀ ಜೈ ಅನ್ನುತ್ತೇವೆ ಹೀಗಾಗಿ ಅವರಿಗೆ ನಾವು ನಕಲಿಗಳಂತೆ ಕಾಣುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್‌ನೊಂದಿಗೆ ಬಿಜೆಪಿ ಕೈಜೋಡಿಸಿರುವ ಕುರಿತಂತೆ ಪಕ್ಷದಲ್ಲಿಯೇ ಕೆಲವರಿಗೆ ಅಸಮಾಧಾನ ಇರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷದ ತೀರ್ಮಾನಕ್ಕೆ ನಾವು ಬದ್ಧ, ನಾವು ವೈಯಕ್ತಿಕ ಅಝೆಂಡಾ ಹೊಂದಿದವರಲ್ಲ. ಪಕ್ಷದ ಅಝೆಂಡಾ ಹೊಂದಿದವರು. ಕೆಲವರಿಗೆ ಅಧಿಕಾರ ಇಲ್ಲವೆಂದರೆ ಉಸಿರುಕಟ್ಟುತ್ತದೆ. ಅಧಿಕಾರ ಇದ್ದಾಗ ಎಸಿಯಲ್ಲಿರುವಂತೆ ಕೂಲ್‌ಆಗಿ ಇರುತ್ತಾರೆ. ಅಧಿಕಾರ ಹೋದ ಬಳಿಕ ವಿಲ ವಿಲ ಒದ್ದಾಡುತ್ತಾರೆ. ನಮಗೆ ಅವೆಲ್ಲಾ ಏನಿಲ್ಲ. ಅದೇ ಹೋರಾಟ, ನಿಲುವು, ವಿಚಾರ ನಿರಂತರವಾಗಿರುತ್ತದೆ ಎಂದು ಹೇಳಿದರು.