ದಾವಣಗೆರೆ: ಬೆಳಗಾವಿ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಕುರಿತು ಸರ್ಕಾರ ಚರ್ಚೆ ಮಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ನಾವಿದ್ದೇವೆ, ಒಂದು ವೇಳೆ ಆ ಬಗ್ಗೆ ಚರ್ಚೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಜನಾಂದೋಲನ ನಡೆಸಬೇಕಾಗುತ್ತದೆ ಎಂದು ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾದಿಗ ಸಮುದಾಯಕ್ಕೆ ಒಳಮೀಸಲಾತಿಗೆ ಒತ್ತಾಯಿಸಿ ಕಳಡೆದ ನವೆಂಬರ್‌ನಲ್ಲಿ ಹೋರಾಟ ನಡೆಸಲಾಗಿದ್ದು, ಈಗ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಸರ್ಕಾರ ಎಂದರೆ ತಾಯಿ ಸಮಾನವಾಗಿರಬೇಕು. ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಅದರಲ್ಲೂ ಶೋಷಣೆಗೆ ಒಳಗಾದ ಕೆಳಸ್ತರದಲ್ಲಿರುವ ಸಮುದಾಯದವರಿಗೆ ಮೀಸಲಾತಿ ನೀಡಬೇಕು. ಆದರೆ, ಈ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಾ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.
ಮಾದಿಗ ಸಮುದಾಯದವರು ಯಾರ ಮೀಸಲಾತಿಯನ್ನು ಕಸಿಯಲು ಪ್ರಯತ್ನಿಸುತ್ತಿಲ್ಲ. ಈಗ ಎಲ್ಲಾ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡುತ್ತಿರುವುದರಿಂದ ರಾಜ್ಯದಲ್ಲಿ ಹೆಚ್ಚಿರುವ ಮಾದಿಗ ಸಮಾಜಕ್ಕೆ ಸೌಲಭ್ಯಗಳು ತಲುಪುತ್ತಿಲ್ಲ. ಆದ ಕಾರಣ ಜನಸಂಖ್ಯೆ ಹೆಚ್ಚಿರುವ ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಕೇಳುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.