ಈ ಚುನಾವಣೆಯಲ್ಲಿ ಮತಕ್ಕಿಂತ ಮಾತೇ ಜಾಸ್ತಿ ಆಗಿವೆ. ಎಲ್ಲಿ ನೋಡಿದರಲ್ಲಿ ಮಾತು. ಅವರು ಮಾತನಾಡಿದರೆಂದು ಇವರು ಮಾತನಾಡುತ್ತಾರೆ. ಇವರು ಮಾತನಾಡಿದರೆಂದು ಅವರು ಮಾತನಾಡುತ್ತಿದ್ದಾರೆ. ಇವರನ್ನು ನೋಡಿ ಇನ್ನೊಬ್ಬರ ಮಾತು. ಈ ಎಲ್ಲ ನೋಡಿದ ಜನರು ಅವರೊಂದು ಮಾತು. ಬರೀ ಮಾತು ಮಾತಿನಿಂದ ಮಂಕಾಗಿ ಹೋಗುವ ಜನರಿಗೆ ಮುಂದೊಂದು ದಿನ ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ ಎಂದರೆ ಯಾರೂ ಬರಲಿಕ್ಕಿಲ್ಲ ಎನ್ನುವುದು ತಿಗಡೇಸಿಯ ವ್ಯಾಖ್ಯಾನ. ಸುಮ್ಮನಿರಲಾರದೇ ಸುಮಾರಣ್ಣ ಆಡಿದ ಆ ಮಾತು..ಈಗ ಮನೆ ಮನೆ ಮಾತಾಗುತ್ತಿದೆ. ಅಂಥದ್ದೇ ಮಾತು ಆಡಲಿ ಎಂದು ಕಾಯುತ್ತಿದ್ದ ಮದ್ರಾಮಣ್ಣ, ಬಂಡೇಸಿ ಮುಂತಾದವರು.. ಇಂಥಾ ಮಾತಾ? ಎಂದು ಅನ್ನುತ್ತಿದ್ದಾರೆ. ಕಮಲದ ಮಂದಿ ಮಾತ್ರ ಎಂಥಾ ಮಾತು, ಒಳ್ಳೇಮಾತು… ಆಡಿದರೆ ಇಂಥಾ ಮಾತು ಆಡಬೇಕು ಸುಮಾರಣ್ಣಾ ಎಂದು ಹಾಡುಕಟ್ಟಿ ಹಾಡುತ್ತಿದ್ದಾರೆ. ಒಳ್ಳೆಯ ಮಾತು ಯಾಕೆ ಆಡಬಾರದು ಎಂದು ಏರ್ಪಡಿಸಿದ ಸಂವಾದದಲ್ಲಿ ಮಾತಿನ ಮಲ್ಲರೆಲ್ಲ… ಇಲ್ಲ ಆಡಬಹುದಾದ ಮಾತುಗಳು ಒಂದೂ ಉಳಿದಿಲ್ಲ. ಹಾಗಾಗಿ ಇಂಥವೇ ಮಾತುಗಳು ಉಳಿದಿವೆ. ಅವುಗಳನ್ನು ಆಡದಿದ್ದರೆ ಮುಂದೆ ನಮಗೆ ಏನೂ ಮಾತನಾಡಲಿಲ್ಲ ನೋಡು ಗುಮ್ಮನಗುಸುಗ ಅಂತ ಅನ್ನಬಾರದು ಎಂದು ಇಂಥ ಮಾತನಾಡುತ್ತೇವೆ. ಅದರಲ್ಲೇನು ತಪ್ಪು? ಅವರು ಬೇಕಾದರೆ ಆಡಲಿ ಎಂದು ಹೇಳಿದ್ದಾರೆ. ದೂರದ ಡೆಲ್ಲಿಯಿಂದ ಬಂದವರೂ ಸಹ ಮಾತನಾಡುತ್ತಾರೆ. ದಾರಿಗುಂಟ ಹೋಗುವವರೂ ಸಹ ಮಾತನಾಡುತ್ತಾರೆ. ಮಾತೇ ಎಲ್ಲ-ಮಾತಿಲ್ಲದೇ ಜೀವನವಿಲ್ಲ. ಮಾತು ಆಡಿದರೆ ಹೋಯಿತು…. ಮುತ್ತು ಒಡೆದರೆ ಹೋಯಿತು ಎನ್ನುವುದು ಆ ಕಾಲದ್ದು. ಈಗ ಏನಿದ್ದರೂ ಮಾತು.. ಮಾತು ಮತ್ತು ಮಾತು. ಅದಕ್ಕೆ ನಾನು ಮಾತನಾಡುತ್ತೇನೆ… ಸುಮಾರಣ್ಣೋರು ಮಾತನಾಡುತ್ತಾರೆ… ಸೋದಿ ಮಾಮಾ ಮಾತನಾಡುತ್ತಾರೆ…ನೀವು ಮಾತನಾಡಿ ಮದ್ರಾಮಣ್ಣೋರೆ ಎಂದು ತಿಗಡೇಸಿ ಅವರಿಗೆ ತಿಳಿಸಿದ್ದಾರೆ ಎಂದು ಖಾಸಗಿ ಚಾನಲ್‌ನ ಕಿವುಡನುಮಿ ವರದಿ ಮಾಡಿದ್ದಾಳೆ.