ಬೆಂಗಳೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ದೇಶ ಕಾಯುವ ಕೆಲಸ ನಿರ್ವಹಿಸಿ ನಿವೃತ್ತರಾದ ಮಾಜಿ ಸೈನಿಕರಿಗೂ ರಾಜಕೀಯದಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮನವಿ ಮಾಡಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಪದಾಧಿಕಾರಿಗಳು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಣೆಗೆ ತೊಡಗಿಕೊಳ್ಳುವ ಯೋಧರ ಪ್ರತಿನಿಧಿಯಾಗಿ ಧ್ವನಿ ಎತ್ತಲು ನಮಗೂ ರಾಜಕೀಯ ಸೇವಾ ಅವಕಾಶ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಶಿವಣ್ಣ, ಗೌರವಾಧ್ಯಕ್ಷರಾದ ಸಿ.ಎಲ್.ಆನಂದ್, ಸಿ.ಎನ್.ಮಂಜೇಗೌಡ, ಎ.ಆರ್.ರಮೇಶ್, ಜಯಕುಮಾರ್ ಎನ್, ಸಿಪಾಯಿ ಶ್ರೀನಿವಾಸ್ ಸೇರಿದಂತೆ ಮುಂತಾದವರು ಮಾತನಾಡಿ, ಮಾಜಿ ಸೇನಾಯೋಧರ ವಿವಿಧ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದೇ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
13ರಂದು ಅಹೋರಾತ್ರಿ ಧರಣಿ
ಮಾಜಿ ಸೇನಾಯೋಧರಿಗೆ ಸಿಗಬೇಕಾದ ಸವಲತ್ತುಗಳಿಗೆ ಆಗ್ರಹಿಸಿ ಮಾಜಿ ಸೈನಿಕರ ಸಂಘದ ವತಿಯಿಂದ ಇದೇ ದಿನಾಂಕ 13ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಅದಕ್ಕೂ ಮುನ್ನ ವಿಧಾನಸೌಧ ಚಲೋ ಕಾರ್ಯಕ್ರಮ ನಡಸಲಾಗುತ್ತದೆ. ಅಂದು ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಮಾಜಿ ಸೈನಿಕರು, ಹುತಾತ್ಮ ಯೋಧರ ಕುಟುಂಬ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಶಿವಣ್ಣ ತಿಳಿಸಿದರು.